ಸಿಎಂ, ಡಿಸಿಎಂ ಭವಿಷ್ಯ ಇಂದು ಕೋರ್ಟಿನಲ್ಲಿ ನಿರ್ಧಾರ

ಮುಡಾ ಕೇಸಿನಲ್ಲಿ ಸಿದ್ದರಾಮಯ್ಯ, ಸಿಬಿಐ ತನಿಖೆ ಹಿಂದೆಗೆದುಕೊಂಡ ಕೇಸಿನಲ್ಲಿ ಡಿಕೆಶಿ ವಿಚಾರಣೆ

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ನಿರ್ಧಾರದ ಭವಿಷ್ಯ ಇಂದು ಹೈಕೋರ್ಟಿನಲ್ಲಿ ನಿರ್ಧಾರವಾಗಲಿದೆ. ಮೈಸೂರಿನ ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ಲಾಭ ಪಡೆದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರ ನಿರ್ಧಾರ ವಿರೋಧಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಲಿದ್ದಾರೆ. ಕ್ಯಾಬಿನೆಟ್ ಸಲಹೆ ಧಿಕ್ಕರಿಸಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಹಾಗೂ ತಮ್ಮ ಆದೇಶಕ್ಕೆ ವಿವರವಾದ ಕಾರಣಗಳನ್ನು ರಾಜ್ಯಪಾಲರು ಕೊಟ್ಟಿಲ್ಲವೆಂಬುದನ್ನು ಪ್ರಧಾನವಾಗಿ ಉಲ್ಲೇಖಿಸಿ ಅಭಿಷೇಕ್ ಮನು ಸಿಂಘ್ವಿ ವಾದಿಸಿದ್ದಾರೆ.

ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 17ಎ ಅಡಿ ಪೊಲೀಸ್ ಅಧಿಕಾರಿ ತನಿಖೆಗೆ ಅನುಮತಿ ಕೇಳಬೇಕೇ ವಿನಹ ಖಾಸಗಿ ದೂರುದಾರರಲ್ಲ ಎಂಬುದನ್ನೂ ತಮ್ಮ ವಾದದಲ್ಲಿ ಉಲ್ಲೇಖಿಸಿದ್ದಾರೆ. ಇದಕ್ಕೆ ರಾಜ್ಯಪಾಲರು ನೀಡಬಹುದಾದ ಕೌಂಟರ್ ಏನು ಎನ್ನುವುದು ಇಂದು ತಿಳಿಯಲಿದೆ.
ಹೈಕೋರ್ಟ್ ಇಂದೇ ವಿಚಾರಣೆ ಪೂರ್ಣಗೊಳಿಸಿದ್ರೆ ಆದೇಶವನ್ನು ಕಾಯ್ದಿರಿಸುವ ಸಾಧ್ಯತೆಗಳು ಹೆಚ್ಚಿವೆ. ಅಂತಹ ಸಂದರ್ಭದಲ್ಲಿ ಹೈಕೋರ್ಟ್ ನೀಡಬಹುದಾದ ಮಧ್ಯಂತರ ಆದೇಶ ಸಿಎಂ ಭವಿಷ್ಯವನ್ನು ನಿರ್ಧರಿಸಲಿದೆ. ಸ್ನೇಹಮಯಿ ಕೃಷ್ಣ, ಟಿ.ಜೆ.ಅಬ್ರಹಾಂರ ಖಾಸಗಿ ದೂರುಗಳ ಭವಿಷ್ಯವನ್ನೂ ಕೋರ್ಟ್ ತೀರ್ಮಾನಿಸಲಿದೆ. ಒಂದು ವೇಳೆ ವಿರುದ್ಧವಾದ ಆದೇಶ ಬಂದರೆ ಮೇಲ್ಮನವಿ ಸಲ್ಲಿಸಲು ವಾದಿ ಸಿದ್ದರಾಮಯ್ಯ ಪ್ರತಿವಾದಿಯಾದ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಸಿದ್ಧತೆ ನಡೆಸಿದ್ದಾರೆ.







































 
 

ಆದಾಯ ಮೀರಿ ಆಸ್ತಿ ಗಳಿಕೆ ಕೇಸ್‌ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಿಬಿಐ ತನಿಖೆಯ ಭೀತಿ ಎದುರಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿ ಹಿಂಪಡೆದು ತನಿಖೆಯ ಹೊಣೆಯನ್ನು ಲೋಕಾಯುಕ್ತ ಪೊಲೀಸರಿಗೆ ವಹಿಸಲು ಸಚಿವ ಸಂಪುಟ ನಿರ್ಧರಿಸಿತ್ತು. ಈ ನಿರ್ಧಾರವನ್ನು ಸಿಬಿಐ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಒಂದು ಬಾರಿ ತನಿಖೆಗೆ ಸಮ್ಮತಿ ನೀಡಿದ ಬಳಿಕ ಅದನ್ನು ಹಿಂಪಡೆಯುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲವೆಂದು ಸಿಬಿಐ ವಾದಿಸಿದರೆ ಡಿ.ಕೆ ಶಿವಕುಮಾರ್ ಪರ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ತನಿಖೆಯ ಹೊಣೆಯನ್ನು ಸಿಬಿಐಗೆ ವಹಿಸಿದ ಸರ್ಕಾರದ ಕ್ರಮವೇ ಕಾನೂನುಬಾಹಿರವೆಂದು ವಾದಿಸಿದ್ದಾರೆ.
ರಾಜ್ಯ ಸರ್ಕಾರದ ಪರ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಸಿಬಿಐ ಒಕ್ಕೂಟ ವ್ಯವಸ್ಥೆಯನ್ನೇ ಧಿಕ್ಕರಿಸಿದೆ. ಸರ್ಕಾರ ಸಿಬಿಐ ತನಿಖೆಗೆ ಸಮ್ಮತಿ ಆದೇಶ ಹೊರಡಿಸುವಾಗ ವಿವೇಚನೆ ಬಳಸಿಲ್ಲ ಎಂದು ವಾದಿಸಿದ್ದರು. ಎರಡೂ ಕಡೆ ವಾದ ಮಂಡನೆ ಆಲಿಸಿದ್ದ ನ್ಯಾಯಮೂರ್ತಿ ಕೆ.ಸೋಮಶೇಖರ್ ಹಾಗೂ ನ್ಯಾಯಮೂರ್ತಿ ಉಮೇಶ್ ಎಂ.ಅಡಿಗರಿದ್ದ ಹೈಕೋರ್ಟ್ ವಿಭಾಗೀಯ ಪೀಠ ಇಂದು (ಆಗಸ್ಟ್​ 29) ಸಂಜೆ 4.30ಕ್ಕೆ ತೀರ್ಪು ಪ್ರಕಟಿಸಲಿದೆ. ಹೈಕೋರ್ಟ್ ಪ್ರಕಟಿಸುವ ತೀರ್ಪು ಡಿಕೆಶಿ ವಿರುದ್ಧದ ಸಿಬಿಐ ತನಿಖೆಯ ಭವಿಷ್ಯ ನಿರ್ಧರಿಸಲಿದೆ.

ಸಿಬಿಐ ತನಿಖೆ ಮುಂದುವರಿಸುವಂತೆ ಹೈಕೋರ್ಟ್ ಆದೇಶಿಸಿದರೆ ಡಿ.ಕೆ ಶಿವಕುಮಾರ್‌ಗೆ ಹಿನ್ನಡೆಯಾಗಲಿದೆ. ಒಂದು ವೇಳೆ ಸಿಬಿಐ ತನಿಖೆಗೆ ಸಮ್ಮತಿ ಹಿಂಪಡೆದು ಲೋಕಾಯುಕ್ತ ಪೊಲೀಸರಿಗೆ ತನಿಖೆ ವಹಿಸಿದ ಸರ್ಕಾರದ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದರೆ ಡಿ.ಕೆ ಶಿವಕುಮಾರ್‌ಗೆ ಬಹುದೊಡ್ಡ ರಿಲೀಫ್ ಸಿಗಲಿದೆ. ಹೀಗಾಗಿ ಇವತ್ತಿನ ಹೈಕೋರ್ಟ್ ವಿಚಾರಣೆ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಪಾಲಿಗೆ ಮಹತ್ವದ್ದಾಗಲಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top