ವಿದ್ಯುತ್‌ ಕಂಬದಲ್ಲಿ ಬಿಲ್ಲುಬಾಣ, ಗದೆ ಅಳವಡಿಸಿದ್ದಕ್ಕೆ ಎಸ್‌ಡಿಪಿಐ ವಿರೋಧ : ತೆರವಿಗೆ ಆದೇಶ

ಹನುಮಂತನ ಜನ್ಮಸ್ಥಳದಲ್ಲಿ ಧಾರ್ಮಿಕ ಸಂಕೇತ ಬಳಸಿರುವುದನ್ನು ಆಕ್ಷೇಪಿಸಿದ ಎಸ್‌ಡಿಪಿಐ

ಬೆಂಗಳೂರು: ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಬಿಲ್ಲುಬಾಣ ಮತ್ತು ಗದೆಯ ಆಕೃತಿಗಳಿರುವ ವಿದ್ಯುತ್‌ ಕಂಬಗಳಿಗೆ ಎಸ್‌ಡಿಪಿಐ ವಿರೋಧ ವ್ಯಕ್ತಪಡಿಸಿದ ಬಳಿಕ ಈ ವಿದ್ಯುತ್‌ ಕಂಬಗಳನ್ನು ತೆರವುಗೊಳಿಸಲು ತಹಶೀಲ್ದಾರ್‌ ಆದೇಶಿಸಿದ್ದಾರೆ. ಹನುಮಂತನ ಜನ್ಮಸ್ಥಾನ ಎಂದು ಅರಿಯಲ್ಪಡುವ ಅಂಜನಾದ್ರಿ ಬೆಟ್ಟ ಇರುವ ಗಂಗಾವತಿಯಲ್ಲಿ ಅಯೋಧ್ಯೆ ಮತ್ತು ತಿರುಪತಿ ಮಾದರಿಯಲ್ಲಿ ವಿದ್ಯುತ್‌ ಕಂಬಗಳನ್ನು ವಿನ್ಯಾಸಗೊಳಿಸಲಾಗಿತ್ತು. ಜುಲೈನಗರ ಎಂಬಲ್ಲಿಂದ ರಾಣಾ ಪ್ರತಾಪ್ ವೃತ್ತದವರೆಗೆ ಅಭಿವೃದ್ಧಿಪಡಿಸಿದ ರಸ್ತೆ ಮಧ್ಯೆ ಬಿಲ್ಲುಬಾಣ ಮತ್ತು ಗದೆ ವಿನ್ಯಾಸವಿರುವ ವಿದ್ಯುತ್‌ ಕಂಬಗಳನ್ನು ಅಳವಡಿಸಲಾಗಿತ್ತು. ಇದು ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡುತ್ತಿದೆ ಎಂದು ಎಸ್‌ಡಿಪಿಐ ದೂರು ನೀಡಿದ ಹಿನ್ನೆಲೆಯಲ್ಲಿ ತೆರವುಗೊಳಿಸಲು ಆದೇಶಿಸಲಾಗಿದೆ.


ವಿದ್ಯುತ್ ಕಂಬಗಳ ತೆರವಿಗೆ ತಹಶೀಲ್ದಾರ್‌ ಆದೇಶಿಸಿರುವುದು ಮಾತ್ರವಲ್ಲದೆ ರಸ್ತೆ ಅಭಿವೃದ್ಧಿಪಡಿಸರುವ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಸಂಸ್ಥೆ (KRIDL) ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ.
ಕೆಐಆರ್‌ಡಿಎಲ್‌ ಸಂಸ್ಥೆ ಸ್ಥಾಪಿಸಿದ ವಿದ್ಯುತ್‌ ಕಂಬಗಳು ಧಾರ್ಮಿಕ ಸೌಹಾರ್ದತೆ ಹಾಗೂ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿವೆ. ಇದು ನಗರದಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವುದರಿಂದ ಅವುಗಳನ್ನು ಕೂಡಲೇ ತೆರವುಗೊಳಿಸಬೇಕು. ಈ ಕಾಮಗಾರಿ ಕೈಗೊಂಡಿರುವ ಕೆಐಆರ್‌ಡಿಎಲ್‌ ಎಂಜಿನಿಯರ್‌ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಂಡು ವರದಿ ನೀಡುವಂತೆ ತಹಶೀಲ್ದಾರ್‌ ನಾಗರಾಜ್‌ ಸೂಚಿಸಿದ್ದಾರೆ.































 
 


ಹನುಮನ ಜನ್ಮಸ್ಥಳವಾಗಿರುವ ಅಂಜನಾದ್ರಿ ಭಾಗವನ್ನು ಅಯೋಧ್ಯೆ, ತಿರುಪತಿ ಮಾದರಿಯಲ್ಲಿ ಅಭಿವೃದ್ಧಿ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಶಾಸಕ ಜನಾರ್ದನ ರೆಡ್ಡಿ ಚುನಾವಣಾ ಪ್ರಣಾಳಿಕೆಯಲ್ಲೂ ಭರವಸೆ ನೀಡಿದ್ದರು. ಅದರಂತೆ ಈಗ ವಿದ್ಯುತ್ ಕಂಬಗಳಲ್ಲಿ ಬಿಲ್ಲು, ಬಾಣಗಳು ಇರುವ ಚಿತ್ರಗಳನ್ನು ಅಳವಡಿಸಲಾಗಿತ್ತು. ವಿದ್ಯುತ್ ಕಂಬಗಳಲ್ಲಿ ಅಳವಡಿಸಿರುವ ಚಿತ್ರಗಳು ಐತಿಹಾಸಿಕ ಅಂಜನಾದ್ರಿ ಪರ್ವತದ ಮಾರ್ಗಸೂಚಿಗೆ ಅನುಕೂಲವಾಗಿವೆ. ಅಂಜನಾದ್ರಿಗೆ ಬರುವ ಭಕ್ತರಲ್ಲಿ ಧಾರ್ಮಿಕ ಭಕ್ತಿ ಉಂಟಾಗುವುದರಿಂದ ಇವುಗಳನ್ನು ಅಳವಡಿಸಲಾಗಿದೆ. ಇದರಿಂದ ಯಾರ ಭಾವನೆಗೂ ಧಕ್ಕೆ ಬರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು. ನಗರಸಭೆಯ ಸರ್ವ ಸದಸ್ಯರ ಸಭೆಯಲ್ಲೂ ಜನಾರ್ದನ ರೆಡ್ಡಿ ಅವರು ವಿಷಯ ಪ್ರಸ್ತಾಪಿಸಿ ಈ ವಿಷಯದಲ್ಲಿ ಅನವಶ್ಯಕ ಗೊಂದಲ ಸೃಷ್ಟಿಸದೆ ಸಹಕಾರ ನೀಡುವಂತೆ ಸದಸ್ಯರಲ್ಲಿ ಮನವಿ ಮಾಡಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top