ಪುತ್ತೂರು: ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ನಡೆಸುವ ಪರೀಕ್ಷೆ ಸೈನ್ಯ ಸೇರುವವರಿಗೆ ಒಳ್ಳೆಯ ಅವಕಾಶ. ಇದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ಸೈನ್ಯದಲ್ಲಿ ಹುಡುಗರು ಮತ್ತು ಹುಡುಗಿಯರು ಇಬ್ಬರಿಗೂ ಸಮಾನ ಅವಕಾಶವಿದೆ. ಆದರೆ ಪ್ರಸ್ತುತ ನಮ್ಮ ಪ್ರದೇಶಗಳಿಂದ ಯುವ ಸಮೂಹ ದೊಡ್ಡ ಉತ್ಸಾಹ ತೋರದಿರುವುದು, ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರದಿರುವುದು ವಿಷಾದಕರ ಎಂದು ರಾಷ್ಟ್ರೀಯ ಸೈನಿಕ ಸಂಸ್ಥೆಯ ರಾಜ್ಯ ಯುವ ಅಧ್ಯಕ್ಷ ಅರವಿಂದ ಹೇಳಿದರು.
ಅವರು ಬಪ್ಪಳಿಗೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಎನ್.ಡಿ.ಎ. ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ದೇಶದಲ್ಲಿಎಂತಹ ಕಷ್ಟ ಬಂದರೂ ಧಾವಿಸಿ ಬರುವವರು ಸೈನಿಕರು. ಆದರೆಕಷ್ಟದ ಸಮಯದಲ್ಲಿ ಮಾತ್ರ ಸೈನಿಕರನ್ನು ನೆನೆಸಿಕೊಳ್ಳುವ ಸ್ವಾರ್ಥಿ ಜನರಿದ್ದಾರೆ. ಇದು ನಮ್ಮ ದುರ್ದೈವ. ಸೈನ್ಯದ ಶಿಕ್ಷಣ ನೀಡುವಲ್ಲಿಇಸ್ರೇಲ್ ಮುಂಚೂಣಿಯಲ್ಲಿದೆ, ಅದೇ ಮಾದರಿಯಲ್ಲಿ ನಮ್ಮ ದೇಶದಲ್ಲಿಯೂ ಕಾನೂನು ಜಾರಿಗೆ ಬರಬೇಕು. ಪ್ರತಿಯೊಬ್ಬರೂ ದೇಶ ಭಕ್ತಿಯ ಪಂಜುಗಳಾಗಬೇಕು ಎಂದರು.
ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲೆ ಸುಚಿತ್ರ ಪ್ರಭು ಮತ್ತು ಎನ್.ಡಿ.ಎ. ತರಬೇತುದಾರೆ ಮಲ್ಲಿಕಾ ಉಪಸ್ಥಿತರಿದ್ದರು. ವಿದ್ಯಾರ್ಥಿ ಶ್ರೀವತ್ಸ.ಪಿ ಕಾರ್ಯಕ್ರಮ ಪ್ರಸ್ತುತಪಡಿಸಿದರು.