ಜಿಹಾದಿ ಸ್ಲೀಪರ್ ಸೆಲ್‌ಗಳಿಗೆ ರೈಲು, ಪೆಟ್ರೋಲಿಯಂ ಲೈನ್‌ಗಳ ಮೇಲೆ ದಾಳಿ ಮಾಡಲು ಕರೆ
ಹೊಸದಿಲ್ಲಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಸೂತ್ರಧಾರ ಪಾಕಿಸ್ತಾನದಲ್ಲಿರುವ ಉಗ್ರ ಫರ್ಹಾತುಲ್ಲಾ ಘೋರಿ ಭಾರತಾದ್ಯಂತ ರೈಲುಗಳ ಮೇಲೆ ದಾಳಿ ನಡೆಸುವಂತೆ ಸ್ಲೀಪರ್ ಸೆಲ್‌ಗಳಿಗೆ ಕರೆ ನೀಡಿದ್ದಾನೆ.
ಜಿಹಾದಿ ಘೋರಿ ಭಾರತದಲ್ಲಿನ ರೈಲ್ವೆ ಸಂಪರ್ಕವನ್ನು ಹಳಿತಪ್ಪಿಸಲು ಸ್ಲೀಪರ್ ಸೆಲ್‌ಗಳಿಗೆ ವಿಡಿಯೋ ಮೂಲಕ ಕರೆ ಕೊಟ್ಟಿದ್ದಾನೆ. ಪ್ರೆಶರ್ ಕುಕ್ಕರ್ ಬಳಸಿ ಬಾಂಬ್ ಸ್ಫೋಟಿಸುವ ವಿವಿಧ ವಿಧಾನಗಳನ್ನು ಈ ವೀಡಿಯೊದಲ್ಲಿ ವಿವರಿಸಿದ್ದಾನೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ಜಾರಿ ನಿರ್ದೇಶನಾಲಯ ಹಾಗೂ ರಾಷ್ಟ್ರೀಯ ಗುಪ್ತಚರ ಸಂಸ್ಥೆ ಮೂಲಕ ಸ್ಲೀಪರ್ ಸೆಲ್‌ಗಳ ಆಸ್ತಿಯನ್ನು ದುರ್ಬಲಗೊಳಿಸುತ್ತಿದೆ. ಹೀಗಾಗಿ ರೈಲುಗಳು ಅಲ್ಲದೇ ಭಾರತದ ಪೆಟ್ರೋಲಿಯಂ ಪೈಪ್‌ಲೈನ್‌ಗಳನ್ನು ನಾಶ ಮಾಡಬೇಕು. ಈ ಮೂಲಕ ಭಾರತ ಸರ್ಕಾರವನ್ನು ಅಲುಗಾಡಿಸಬೇಕು ಎಂದು ಹೇಳಿದ್ದಾನೆ. ಮೂರು ವಾರಗಳ ಹಿಂದೆ ಟೆಲಿಗ್ರಾಮ್‌ನಲ್ಲಿ ಈ ವೀಡಿಯೊವನ್ನು ಬಿಡುಗಡೆ ಮಾಡಲಾಗಿದೆ ಎಂದು ಗುಪ್ತಚರ ಸಂಸ್ಥೆಗಳ ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಬೆಂಬಲದೊಂದಿಗೆ ಸ್ಲೀಪರ್ ಸೆಲ್ ಮೂಲಕ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದ್ದ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿತ್ತು.
ಅಬು ಸೂಫಿಯಾನ್, ಸರ್ದಾರ್ ಸಾಹಬ್ ಮತ್ತು ಫಾರೂ ಎಂದೂ ಕರೆಯಲ್ಪಡುವ ಫರ್ಹತುಲ್ಲಾ ಘೋರಿ 2002ರಲ್ಲಿ ಗುಜರಾತ್‌ನ ಅಕ್ಷರಧಾಮ ದೇವಾಲಯದ ಮೇಲೆ ದಾಳಿ ನಡೆಸಿದ್ದ. ಆ ದಾಳಿಯಲ್ಲಿ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, 80 ಜನರು ಗಾಯಗೊಂಡಿದ್ದರು. ಜೊತೆಗೆ 2005ರಲ್ಲಿ ಹೈದರಾಬಾದ್‌ನ ಟಾಸ್ಕ್ ಫೋರ್ಸ್ ಕಚೇರಿ ಮೇಲೆ ನಡೆದ ದಾಳಿಯಲ್ಲಿಯೂ ಈತನ ಕೈವಾಡ ಇರುವುದು ದೃಢಪಟ್ಟಿತ್ತು.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ 10 ಜನರು ಗಾಯಗೊಂಡಿದ್ದರು. ಕಳೆದ ವರ್ಷ ದೆಹಲಿ ಮತ್ತು ಉತ್ತರ ಪ್ರದೇಶದಿಂದ ಮೂವರು ಮೋಸ್ಟ್ ವಾಂಟೆಡ್ ಭಯೋತ್ಪಾದಕರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ತನಿಖೆಯ ವೇಳೆ ಘೋರಿ ಭಯೋತ್ಪಾದಕರ ಹ್ಯಾಂಡ್ಲರ್ ಆಗಿರುವ ವಿಚಾರ ಬೆಳಕಿಗೆ ಬಂದಿತ್ತು.