ಪೆರಾಬೆ ಶಾಲಾ ಕಟ್ಟಡ ಕುಸಿತ ಪ್ರಕರಣ | ಜಿಲ್ಲಾ ಪಂಚಾಯತ್ ಇಂಜಿನಿಯರ್ ಸಂಗಪ್ಪ ಹುಕ್ಕೇರಿ ಹಾಗೂ ಶಾಲಾ ಮುಖ್ಯ ಶಿಕ್ಷಕ ರಮೇಶ್ ಅಮಾನತು

ಕಡಬ: ತಾಲೂಕಿನ ಪೆರಾಬೆ ಗ್ರಾಮದಲ್ಲಿ ಕುಂತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಒಂದು ಭಾಗ ಹಾಗೂ ಛಾವಣಿ ಕುಸಿತ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಪಂಚಾಯತ್ ಇಂಜಿನಿಯರ್ ಸಂಗಪ್ಪ ಹುಕ್ಕೇರಿ ಹಾಗೂ ಶಾಲಾ ಮುಖ್ಯ ಶಿಕ್ಷಕ ರಮೇಶ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಅಮಾನತುಗೊಳಿಸಿದ್ದಾರೆ.

ಶಾಲಾ ಕಟ್ಟಡದ ಛಾವಣಿ ಸಹಿತ ಒಂದು ಭಾಗ ಕುಸಿದು ಬಿದ್ದು ನಾಲ್ವರು ವಿದ್ಯಾರ್ಥಿಗಳಾದ 7ನೇ ತರಗತಿಯ ರಶ್ಮಿ ದೀಕ್ಷಾ, ಫಾತಿಮಾ ಸುಹಾನಾ ಮತ್ತು ಯಶಿತಾ ಗಾಯಗೊಂಡಿದ್ದರು. ಅದೃಷ್ಟವಶಾತ್, ಹೆಚ್ಚಿನ ವಿದ್ಯಾರ್ಥಿಗಳು ಆ ಸಮಯದಲ್ಲಿ ಶಾಲಾ ಮೈದಾನದಲ್ಲಿ ಇದ್ದುದರಿಂದ ಭಾರೀ ಅನಾಹುತ ತಪ್ಪಿತ್ತು.

ಶಾಲಾ ಕಟ್ಟಡದ ಹಿಂಭಾಗದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಅಗೆಯುವ ಯಂತ್ರ ಬಳಸಿ ಟ್ರೆಂಚ್ ತೋಡುತ್ತಿದ್ದ ವೇಳೆ ಕುಸಿತ ಸಂಭವಿಸಿದೆ. ಇಬ್ಬರು ವಿದ್ಯಾರ್ಥಿಗಳು ಕಟ್ಟಡದೊಳಗೆ ಸಿಲುಕಿಕೊಂಡಿದ್ದರು, ಆದರೆ ಸ್ಥಳೀಯರು ಕೂಡಲೇ ರಕ್ಷಿಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ರವಾನಿಸಲಾಗಿತ್ತು. ಪುತ್ತೂರಿನ ಸಹಾಯಕ ಕಮಿಷನರ್ ಜುಬಿನ್ ಮಹಾಪಾತ್ರ, ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.







































 
 

ಕುಸಿದ ಕಟ್ಟಡವು ಸರಿಸುಮಾರು 50 ವರ್ಷಗಳಷ್ಟು ಹಳೆಯದಾಗಿದೆ ಮತ್ತು ಸರಿಯಾದ ಅಡಿಪಾಯವನ್ನು ಹೊಂದಿಲ್ಲ, ಇದು ಕುಸಿತಕ್ಕೆ ಕಾರಣವಾಗಿರಬಹುದು. ಕಟ್ಟಡದ ದುಸ್ಥಿತಿಯ ಅರಿವಿದ್ದರೂ ತರಾತುರಿಯಲ್ಲಿ ಕಾಮಗಾರಿ ಆರಂಭಿಸಿರುವುದು ಸ್ಥಳೀಯರು ಹಾಗೂ ಪೋಷಕರ ಆಕ್ರೋಶಕ್ಕೆ ಇದೀಗ ಕಾರಣವಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top