ಜೋಧ್ಪುರ: ಕೋಲ್ಕತದಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ಘಟನೆಗೆ ವ್ಯಕ್ತವಾಗಿರುವ ಪ್ರತಿಭಟನೆಯ ಬಿಸಿ ತಣ್ಣಗಾಗುವ ಮೊದಲೇ ರಾಜಸ್ಥಾನದಲ್ಲಿ ಇದೇ ಮಾದರಿಯ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ರಾಜಸ್ಥಾನದ ಜೋಧ್ಪುರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ಬಾಲಕಿ ತಾಯಿ ಗದರಿಸಿದ ಕಾರಣಕ್ಕೆ ಸಿಟ್ಟಿನಿಂದ ಕಳೆದ ಭಾನುವಾರ ಮನೆ ತೊರೆದಿದ್ದಳು. ಅದೇ ದಿನ ಸಂಜೆ ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಆದರೆ ಪೊಲೀಸರಿಗೆ ಸೋಮವಾರ ಸಂಜೆ ಮಾಹಿತಿ ಸಿಕ್ಕಿದೆ.
ಇಬ್ಬರು ವ್ಯಕ್ತಿಗಳು ಆಸ್ಪತ್ರೆಯ ಆವರಣದಲ್ಲಿ ಬಾಲಕಿ ಒಂಟಿಯಾಗಿರುವುದನ್ನು ಕಂಡು ಆಸ್ಪತ್ರೆಯ ಬಯೋಮೆಡಿಕಲ್ ತ್ಯಾಜ್ಯ ಡಂಪ್ಯಾರ್ಡ್ನ ಹಿಂದಿನ ಏಕಾಂತ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಮನೆಯವರು ಅವಳನ್ನು ಹುಡುಕಿದ್ದಾರೆ. ಕಾಣದಿದ್ದಾಗ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಡಂಪಿಂಗ್ ಯಾರ್ಡ್ನಲ್ಲಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ಸೋಮವಾರ ಮಧ್ಯಾಹ್ನ ಬಾಲಕಿ ಕಷ್ಟಪಟ್ಟು ಹೊರಗೆ ಬಂದಾಗ ಸಾಮೂಹಿಕ ಅತ್ಯಾಚಾರ ನಡೆದಿರುವ ಮಾಹಿತಿ ಬೆಳಕಿಗೆ ಬಂದಿದೆ.
ಮಂಗಳವಾರ ಬೆಳಗ್ಗೆ ಎಫ್ಎಸ್ಎಲ್ ತಂಡವನ್ನು ಆಸ್ಪತ್ರೆಗೆ ಕರೆಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳಿಬ್ಬರು ನೈರ್ಮಲ್ಯ ಕಾರ್ಮಿಕರು ಎಂದು ಗೊತ್ತಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ. ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಸಂತ್ರಸ್ತೆ ಬಾಲಕಿಯ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.