ಬೆಂಗಳೂರು: ಕೊಲೆ ಆರೋಪದಲ್ಲಿ ಸೆರೆಯಾಗಿರುವ ನಟ ದರ್ಶನ್ ಬಳ್ಳಾರಿ ಜೈಲಿಗೆ ಹೋಗುತ್ತಿರುವುದು ಇದು ಎರಡನೇ ಸಲ.
ಈ ಮೊದಲು ಅವರು ಶೂಟಿಂಗ್ ಸಲುವಾಗಿ ಕೆಲವು ದಿನ ಬಳ್ಳಾರಿ ಜೈಲಿಗೆ ಹೋಗಿ ಬರುತ್ತಿದ್ದರು. 2017ರಲ್ಲಿ ತೆರೆ ಕಂಡಿದ್ದ ಚೌಕ ಸಿನಿಮಾದ ಶೂಟಿಂಗ್ ಬಳ್ಳಾರಿ ಜೈಲಿನಲ್ಲಿ ನಡೆದಿತ್ತು. ಕೊನೆ ಭಾಗವನ್ನು ಜೈಲಿನಲ್ಲಿರುವ ಖಾಲಿ ಸೆಲ್‌ಗಳಲ್ಲಿ ಚಿತ್ರೀಕರಣ ಮಾಡಲಾಗಿತ್ತು.
ಈ ಚಿತ್ರದ ಶೂಟಿಂಗ್‌ಗಾಗಿ ದರ್ಶನ್ ಜೈಲಿಗೆ ಹೋಗಿದ್ದರು. ಅಂದು ಶೂಟಿಂಗ್‌ಗಾಗಿ ಹೋದಾಗ ಅಲ್ಲಿದ್ದ ಕೈದಿಗಳು ಅವರನ್ನು ನೋಡಲು ಹಾತೊರೆದಿದ್ದರು. ಇಂದು ಅದೇ ಜೈಲಿಗೆ ತಾನೇ ಕೈದಿಯಾಗಿ ದರ್ಶನ್ ಹೋಗುತ್ತಿದ್ದಾರೆ.
ಇಂದು ದರ್ಶನ್ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗಲಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರೆದುರು ಹಾಜರುಪಡಿಸಲಾಗುತ್ತದೆ. ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆಯಾಗುವ ಸಾಧ್ಯತೆಯಿದೆ. ನ್ಯಾಯಾಧೀಶರು ಮತ್ತೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ ನಂತರ ಮಧ್ಯಾಹ್ನ 1 ಗಂಟೆ ಬಳಿಕ ಬಿಗಿ ಭದ್ರತೆಯಲ್ಲಿ ಪೊಲೀಸರು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ಸಿಗುತ್ತಿರುವುದು ಬಯಲಾದ ಬಳಿಕ ತೀವ್ರ ಮುಜುಗರಕ್ಕೀಡಾಗಿರುವ ಸರಕಾರ ನಟನನ್ನು ಬೇರೆ ಜೈಲಿಗೆ ಸ್ಥಳಾಂತರಿಸಲು ನಿರ್ಧರಿಸಿದೆ.
ಮತ್ತೆ ಮೂವರು ಅಧಿಕಾರಿಗಳ ಅಮಾನತು
ದರ್ಶನ್‌ಗೆ ವಿಶೇಷ ಆತಿಥ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಜೈಲು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಜೈಲರ್ ಪರಮೇಶ ನಾಯಕ್. ಅಸಿಸ್ಟೆಂಟ್ ಜೈಲರ್ ಕೆ.ಪಿ.ರಾಯಮಾನೆ ಹಾಗೂ ವಾರ್ಡರ್ ಸುದರ್ಶನ್ ಅಮಾನತಾಗಿದ್ದಾರೆ.
ಜೈಲಿನಲ್ಲಿ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಹಾಗೂ ಇತರರ ಜೊತೆ ನಟ ದರ್ಶನ್ ಟೀ ಕುಡಿಯುತ್ತಾ, ಸಿಗರೇಟ್ ಸೇದುತ್ತಾ ಕುಳಿತಿರುವುದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಲಾಗಿದೆ ಎಂದು ವಿವಾದ ಹುಟ್ಟುಕೊಂಡಿತು. ಇದರ ಬೆನ್ನಲ್ಲೇ ಜೈಲಿನಲ್ಲಿ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ 9 ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಕೇಂದ್ರ ಕಾರಗೃಹ ಮುಖ್ಯ ಅಧೀಕ್ಷಕ ವಿ.ಶೇಷಮೂರ್ತಿ ಅವರೂ ಅಮಾನತುಗೊಂಡಿದ್ದರು. ಈಗ ಅವರ ಸ್ಥಾನಕ್ಕೆ ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕರಾಗಿ ಸುರೇಶ್ ನೇಮಕಗೊಂಡಿದ್ದಾರೆ.