ಮುಂಬಯಿ: ಕಳೆದ ವರ್ಷ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದ ಮರಾಠ ರಾಜ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ 35 ಅಡಿ ಎತ್ತರದ ಕುಸಿದು ಬಿದ್ದಿದೆ. ಮಾಲ್ವಾನ್‌ನ ರಾಜ್‌ಕೋಟ್ ಕೋಟೆಯಲ್ಲಿ ನಿರ್ಮಿಸಲಾಗಿದ್ದ 35 ಅಡಿ ಎತ್ತರದ ಪ್ರತಿಮೆ ನಿನ್ನೆ ಮಧ್ಯಾಹ್ನ ಕುಸಿದಿದೆ. ಪ್ರತಿಮೆಯ ಕುಸಿತದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಜಿಲ್ಲೆಯಲ್ಲಿ ಕಳೆದ 2-3 ದಿನಗಳಲ್ಲಿ ಭಾರಿ ಮಳೆ ಮತ್ತು ಬಿರುಗಾಳಿ ಬೀಸಿದೆ. ಇದೇ ಕುಸಿತಕ್ಕೆ ಕಾರಣವಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಪೊಲೀಸ್ ಹಾಗೂ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕನ ನಡೆಸಿದ್ದು, ಹಾನಿಯನ್ನು ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ. ಕಳೆದ ವರ್ಷ ಡಿಸೆಂಬರ್ 4 ನೌಕಾಪಡೆಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಶಿವಾಜಿ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು.
ಅಧಿಕಾರಿಗಳು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಈ ಘಟನೆಯ ಹಿಂದಿನ ಕಾರಣವನ್ನು ಕಂಡುಹಿಡಿಯಲಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ. ಅದೇ ಸ್ಥಳದಲ್ಲಿ ಶಿವಾಜಿಯ ಪ್ರತಿಮೆಯನ್ನು ಮರುಸ್ಥಾಪಿಸುವುದಾಗಿ ಭರವಸೆ ನೀಡಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರು ಮಹಾರಾಷ್ಟ್ರದ ಪೂಜ್ಯ ದೇವರು. ಈ ಪ್ರತಿಮೆಯನ್ನು ನೌಕಾಪಡೆ ಸ್ಥಾಪಿಸಿದೆ. ಅವರೇ ಇದನ್ನು ವಿನ್ಯಾಸಗೊಳಿಸಿದ್ದರು. ಆದರೆ ವೇಗವಾಗಿ ಬೀಸಿದ ಗಾಳಿಯಿಂದಾಗಿ ಆ ಪ್ರತಿಮೆ ಬಿದ್ದಿದೆ. ಪಿಡಬ್ಲ್ಯುಡಿ ಮತ್ತು ನೌಕಾಪಡೆಯ ಅಧಿಕಾರಿಗಳು ಅದೇ ಸ್ಥಳದಲ್ಲಿ ಮಹಾರಾಷ್ಟ್ರದ ಪೂಜ್ಯ ಆರಾಧ್ಯ ದೈವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಮರುಸ್ಥಾಪಿಸುತ್ತಾರೆ ಎಂದು ಸಿಎಂ ಶಿಂಧೆ ಹೇಳಿದ್ದಾರೆ.