ಪುತ್ತೂರು: ಮಾತಾ ಪಿತರ ಋಣ, ದೇವ ಋಣ, ಋಷಿ ಋಣ ಇತ್ಯಾದಿಗಳು ನಮಗಿದ್ದು, ಅವುಗಳನ್ನು ತೀರಿಸುವುದು ನಮ್ಮ ಕರ್ತವ್ಯ. ಅದೇ ರೀತಿ ನಾವು ದೇವರನ್ನು ಭಕ್ತಿಯಿಂದ ನಂಬಿದರೆ ಭಕ್ತರ ಋಣ ತೀರಿಸಲು ಭಗವಂತ ಕೂಡ ಕಾಯುತ್ತಾನೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ, ತಾಲೂಕು ಗೊಲ್ಲ (ಯಾದವ ) ಸಂಘ, ಯಾದವ ಸಭಾ ತಾಲೂಕು ಸಮಿತಿ ಸಹಯೋಗದಲ್ಲಿ ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿ ಸೋಮವಾರ ನಡೆದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇವರನ್ನು ನಾವು ಯಾರೂ ನೋಡಿರದಿದ್ದರೂ ಹೆತ್ತ ತಂದೆ ತಾಯಿಗಳ ಸೇವೆ ಮಾಡಿದರೆ ಖಂಡಿತಾ ದೇವರು ನಮಗೆ ಒಳಿತನ್ನು ಮಾಡುತ್ತಾನೆ ಎಂದು ಹೇಳಿದರು.
ಯಾದವ ಸಭಾ ತಾಲೂಕು ಸಮಿತಿ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಮಾತನಾಡಿ, ಪುತ್ತೂರು ತಾಲೂಕಿನಲ್ಲಿ ಸುಮಾರು 2 ಸಾವಿರದಷ್ಟು ಯಾದವ ಸಮುದಾಯದ ಜನರಿದ್ದಾರೆ. ಸಮುದಾಯದ ಪೂರ್ಣ ಸಹಕಾರದೊಂದಿಗೆ ತಾಲೂಕು ಆಡಳಿತ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಶ್ರೀಕೃಷ್ಣ ಜಯಂತಿ ಆಚರಿಸುವಂತಾಗಬೇಕು ಎಂದರು.
ಗೊಲ್ಲ (ಯಾದವ) ಸಂಘ ಪುತ್ತೂರು ಅಧ್ಯಕ್ಷ ಇ.ಎಸ್. ವಾಸುದೇವ ಮಾತನಾಡಿದರು. ಹಿರಿಯ ಯಕ್ಷಗಾನ ಕಲಾವಿದ ಈಶ್ವರ ಭಟ್ ಗುಂಡ್ಯಡ್ಕ ಸಂಸ್ಮರಣಾ ಉಪನ್ಯಾಸ ನೀಡಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ತಹಸೀಲ್ದಾರ್ ಪುರಂದರ ಹೆಗ್ಡೆ, ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್. ಆರ್., ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷರಾದ ಉಮಾನಾಥ ಶೆಟ್ಟಿ ಉಪಸ್ಥಿತರಿದ್ದರು.
ತಹಸೀಲ್ದಾರ್ ಕಚೇರಿಯ ದಯಾನಂದ್ ಸ್ವಾಗತಿಸಿದರು. ಸುಲೋಚನಾ ಕಾರ್ಯಕ್ರಮ ನಿರ್ವಹಿಸಿದರು.