ಯುವಜನತೆಯನ್ನು ಸಾಹಿತ್ಯ ಕ್ಷೇತ್ರಕ್ಕೆ ಬರಮಾಡಿಕೊಳ್ಳಲು ಉತ್ತಮ ವೇದಿಕೆ – ಲಕ್ಷ್ಮೀಶ ತೋಳ್ಪಾಡಿ | ನರಿಮೊಗರು ಗ್ರಾಮ ಸಾಹಿತ್ಯ ಸಂಭ್ರಮ

ಪುತ್ತೂರು: ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ನೇತೃತ್ವದಲ್ಲಿ, ಗ್ರಾಮ ಪಂಚಾಯತ್ ನರಿಮೊಗರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಸಹಕಾರದಲ್ಲಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ, ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ ಅಬುದಾಬಿಯವರ ಪೋಷಕತ್ವದಲ್ಲಿ, ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದಂಗವಾಗಿ ನರಿಮೊಗರು ಸ. ಉ. ಹಿ. ಪ್ರಾ. ಶಾಲೆಯ ಶತ ಸಂಭ್ರಮ ವೇದಿಕೆಯಲ್ಲಿ ನಡೆದ ಗ್ರಾಮ ಸಾಹಿತ್ಯ ಸಂಭ್ರಮ ಸರಣಿ -16 ಯಶಸ್ವಿಯಾಗಿ ನಡೆಯಿತು.

ನರಿಮೊಗರು ಹಾಗೂ ಶಾಂತಿಗೋಡು ಗ್ರಾಮದ  ಎಂಟು ಶಾಲೆಯ ಆಯ್ದ ಸಾಹಿತ್ಯಾಸಕ್ತ  ವಿದ್ಯಾರ್ಥಿಗಳು  ಪುರುಷರ ಕಟ್ಟೆಯಿಂದ ಭಾರತ ಸೇವಾದಳದ  ವಾದ್ಯಘೋಷ ಹಾಗೂ ಹುಲಿ ವೇಷ ಚೆಂಡೆ ವಾದ್ಯದೊಂದಿಗೆ  ಕನ್ನಡ ಭುವನೇಶ್ವರಿಯ ಭಾವಚಿತ್ರದೊಂದಿಗೆ ಕನ್ನಡ ಬಾವುಟವನ್ನು ಹಾರಿಸುತ್ತಾ ಕನ್ನಡ ಭುವನೇಶ್ವರಿಗೆ ಜಯ ಘೋಷ ಹಾಕುತ್ತಾ ಸಾಹಿತ್ಯ ಸಂಭ್ರಮದ ಸರ್ವಾಧ್ಯಕ್ಷತೆ ವಹಿಸಿದ ಪುಟಾಣಿ ಕು. ಪೂಜಾಶ್ರೀ ಅವರನ್ನು ಹಾಗೂ ಸಮಾರೋಪ ಭಾಷಣಗಾರ ಪುಟಾಣಿ ಧವನ್ ಕುಮಾರ್ ಅವರನ್ನು ಕನ್ನಡ ಶಾಲು ಹಾಗು ಕನ್ನಡ ಪೇಟವನ್ನು ತೊಡಿಸಿ  ಭವ್ಯ ಮೆರವಣಿಗೆ ಮೂಲಕ ಸಭಾಂಗಣಕ್ಕೆ ಬರಮಾಡಿಕೊಳ್ಳಲಾಯಿತು.

ಸಭಾಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರು ಈ ಗ್ರಾಮದ ಶಾಲಾ ವಿದ್ಯಾರ್ಥಿಗಳಿಗೆ ಬರವಣಿಗೆ ಮತ್ತು ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವರೂಪದಲ್ಲೇ ಈ ಕಾರ್ಯಕ್ರಮ ನಡೆಯುತ್ತಿದ್ದು, ವಿದ್ಯಾರ್ಥಿಗಳೇ ಸರ್ವಾಧ್ಯಕ್ಷತೆ ಮತ್ತು ಸಮಾರೋಪ ಭಾಷಣಗಾರರಾಗಿರುವುದು ಒಂದು ವಿನೋತನ ಪ್ರಯೋಗ.ಸಾಹಿತ್ಯಾಸಕ್ತ ವಿದ್ಯಾರ್ಥಿಗಳಿಗೆ ಮಾತ್ರ ಸೂಕ್ತ ಅವಕಾಶ ಒದಗಿಸಿ ಬೆಳೆಸುವ ಹಾಗೂ ಮಕ್ಕಳು ಸಂಭ್ರಮಿಸುವ ಸಾಹಿತ್ಯ ಹಬ್ಬ ಇದಾದೆ ಎಂದರು.































 
 

ಸಾಂದೀಪನಿ ವಿದ್ಯಾ ಸಂಸ್ಥೆಯ ಅಧ್ಯಕ್ಷ  ಜಯರಾಮ ಕೆದಿಲಾಯ ಶಿಬರ ಅವರು ದೀಪ  ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ವೇದಿಕೆಯನ್ನು ನೀಡುವ ಈ ಗ್ರಾಮ ಸಾಹಿತ್ಯ ಸಂಭ್ರಮವು ಅತ್ಯಂತ ಪರಿಣಾಮಕಾರಿಯಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ನರಿಮೊಗರು ಸಿ ಆರ್ ಪಿ ಪರಮೇಶ್ವರಿ ಪ್ರಸಾದ್, ನರಿಮೊಗರು ಎಸ್ ಡಿ ಎಂ ಅಧ್ಯಕ್ಷರಾದ ಶ್ರೀ ಕೃಷ್ಣರಾಜ ಜೈನ್ ಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸರ್ವಾಧ್ಯಕ್ಷತೆ ವಹಿಸಿ ಸ. ಉ. ಹಿ. ಪ್ರಾ. ಶಾಲೆ ನರಿಮೊಗರು ಶಾಲೆ ವಿದ್ಯಾರ್ಥಿನಿ ಪೂಜಾಶ್ರೀ, ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಸು ಕಾಣಬೇಕು ಮತ್ತು ಆ ಕನಸು ನನಸಾಗುವಲ್ಲಿ ನಮ್ಮ ಪ್ರಯತ್ನ ಬೇಕು. ಇಂತಹ ಒಂದು ಅವಕಾಶ ನನಗೆ ದೊರಕಿಸಿ ಕೊಟ್ಟ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕಕ್ಕೆ ಕೃತಜ್ಞತೆ ಸಲ್ಲಿಸಿದರು.

ಗ್ರಾಮದ ವಿವಿಧ ಕ್ಷೇತ್ರದ ಸಾಧಕರಿಗೆ ಅಭಿನಂದನೆ:-

ಸಮಾರಂಭದಲ್ಲಿ ಸಾಹಿತ್ಯ ಕ್ಷೇತ್ರದ ಸಾಧನೆ ಮಾಡಿರುವ ಅವಿನಾಶ್ ಕೊಡಂಕಿರಿ, ಪರೀಕ್ಷಿತ್ ತೋಳ್ಪಾಡಿ, ನಾಟಿ ವೈದ್ಯೆ ಯಮುನಾ ಪೂಜಾರಿ, ಜಾನಪದ ಕ್ಷೇತ್ರದ ಸುಧಾಕರ್ ಕುಲಾಲ್, ಶಿಕ್ಷಣ ಕ್ಷೇತ್ರದ ಸವಿತಾ ಕುಮಾರಿ ಎಂ. ಡಿ, ಕಲೆ ಮತ್ತು ಸಾಹಿತ್ಯ ಕ್ಷೇತ್ರದ ವಿದ್ವಾನ್ ಗೋಪಾಲಕೃಷ್ಣ, ಸಾಹಿತ್ಯ, ವೈದ್ಯಕೀಯ ಮತ್ತು ಜನಜಾಗೃತಿ ಕ್ಷೇತ್ರದ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ, ಕೃಷಿ ಕ್ಷೇತ್ರದ ಸಾಧನೆಗಾಗಿ ಜಯರಾಮ ಕೆದಿಲಾಯ, ಹೈನುಗಾರಿಕೆ ಕ್ಷೇತ್ರದ ಸಾಧನೆಗಾಗಿ ಜಯಗುರು ಹಿಂದಾರು, ಶಿಕ್ಷಣ, ಕಲೆ ಮತ್ತು ಪರಿಸರ ಜಾಗೃತಿಯಲ್ಲಿ ಮಾಡಿರುವ ಸಾಧನೆಗಾಗಿ ತಾರಾನಾಥ್ ಪಿ. ಸವಣೂರು ಅವರನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶ್ರೀ ಲಕ್ಷ್ಮೀಶ್ ತೋಳ್ಪಾಡಿಯವರು ಅಭಿನಂದಿಸಿದರು.

 ಸ. ಉ. ಹಿ ಪ್ರಾ ಶಾಲೆ ನರಿಮೊಗರು ವಿದ್ಯಾರ್ಥಿಗಳು ನಾಡಗೀತೆ ಹಾಡುವುದರ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಗ್ರಾಮ ಸಾಹಿತ್ಯ ಸಂಭ್ರಮದ 16 ಸರಣಿ ಕಾರ್ಯಕ್ರಮದಲ್ಲಿ  ಒಟ್ಟು 1145 ವಿದ್ಯಾರ್ಥಿಗಳಿಗೆ ವಿವಿಧ ಗೋಷ್ಠಿಗಳಲ್ಲಿ ಅವಕಾಶ,101 ಸಾಧಕರಿಗೆ ಸನ್ಮಾನ,65 ಮಂದಿ ಸಾಹಿತ್ಯ ಆಸಕ್ತರಿಗೆ ಪ್ರಪ್ರಥಮ ಬಾರಿ ಕವಿಗೋಷ್ಠಿಯ,ಕಥಾ ಗೋಷ್ಠಿಯ ಅಧ್ಯಕ್ಷತೆ, 200 ಸಾರ್ವಜನಿಕರಿಗೆ ಕವಿಗೋಷ್ಠಿ ಅವಕಾಶ ನೀಡಲಾಗಿದ್ದು ತಾಲೂಕಿನ ಒಟ್ಟು 79 ಶಾಲೆಗಳು ಈವರೆಗೆ ಭಾಗಿಯಾಗಿವೆ ಎಂದು  ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕರಾದ ಶ್ರೀ ನಾರಾಯಣ ಕುಂಬ್ರ ಅವರು ತಮ್ಮ ಪ್ರಾಸ್ತಾವಿಕ  ನುಡಿಯಲ್ಲಿ ತಿಳಿಸಿದರು.

ನರಿಮೊಗರು ಶಾಲಾ ಮುಖ್ಯ ಶಿಕ್ಷಕಿ ಶ್ರೀಲತಾ ರೈ ಎ. ಸ್ವಾಗತಿಸಿದರು , ಜಗದೀಶ್ ಬಾರಿಕೆ, ಸುಪ್ರೀತಾ ಚರಣ್ ಪಾಲಪ್ಪೆ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top