ಹಾಲಿವುಡ್ ಸಿನಿಮಾ ಪಾತ್ರದ ವೇಷದ ಬಗ್ಗೆ ಭಾರಿ ಕುತೂಹಲ
ಉಡುಪಿ: ಕೃಷ್ಣಾಷ್ಟಮಿ ದಿನ ವಿಶಿಷ್ಟ ವೇಷಗಳನ್ನು ಹಾಕಿ ಹಣ ಸಂಗ್ರಹಿಸಿ ಬಡವರಿಗೆ ನೆರವಾಗುತ್ತಿರುವ ರವಿ ಕಟಪಾಡಿ ಈ ಸಲ ಅವತಾರ್ ರೂಪದಲ್ಲಿ ಬರಲಿದ್ದಾರೆ.
ತನ್ನದೇ ಆದ ವಿಶೇಷ ಪರಿಕಲ್ಪನೆಯ ಮೂಲಕ ಕೃಷ್ಣಾಷ್ಟಮಿಯ ವೇಷಕ್ಕೊಂದು ಹೊಸ ಆಯಾಮವನ್ನೇ ನೀಡಿರುವ ರವಿ ಕಟಪಾಡಿಯವರ ವೇಷದ ಕುರಿತು ಎಲ್ಲರಿಗೂ ಬಹಳ ಕುತೂಹಲವಿರುತ್ತದೆ. ಮನರಂಜನೆಗಾಗಿ ಧರಿಸುವ ವೇಷವನ್ನು ಸಮಾಜದ ಉದ್ಧಾರಕ್ಕಾಗಿ ಈ ರೀತಿ ಬಳಸಬಹುದು ಎಂದು ತೋರಿಸಿಕೊಟ್ಟವರು ರವಿ ಕಟಪಾಡಿ. ಇದಕ್ಕಾಗಿ ಈಗಾಗಲೇ ಅವರು ರಾಷ್ಟ್ರಮಟ್ಟದಲ್ಲಿ ಖ್ಯಾತರಾಗಿದ್ದು, ಅನೇಕ ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳಿಗೆ ಪಾತ್ರರಾಗಿದ್ದಾರೆ.
ಈಗ ಅನೇಕ ಮಂದಿ ವಿವಿಧ ಸಂದರ್ಭಗಳಲ್ಲಿ ರವಿ ಕಡಪಾಡಿ ಅವರನ್ನು ಅನುಕರಿಸಿ ವೇಷ ಧರಿಸಿ ಹಣ ಸಂಗ್ರಹಿಸಿ ಬಡವರಿಗೆ ನೆರವಾಗುತ್ತಿರುವುದು ರವಿಯವರ ವೇಷದ ಯಶಸ್ಸಿಗೊಂದು ನಿದರ್ಶನ.
ಈ ಸಲ ಅವರು ಹಾಲಿವುಡ್ ಸಿನೆಮಾ ಅವತಾರ್-2ರಲ್ಲಿ ಇರುವಂತೆ ಬೃಹತ್ ಹಕ್ಕಿಯ ಮೇಲೆ ಬರುವ ವೇಷವನ್ನು ಧರಿಸಲಿದ್ದಾರೆ. ಶಂಕರಪುರ, ಕಟಪಾಡಿ ಮತ್ತು ಉದ್ಯಾವರದ ಶಾಲೆಗೆ ಹೋಗಿ ಮಕ್ಕಳಿಗೆ ಮನರಂಜನೆಯನ್ನೂ ನೀಡಲಿದ್ದಾರೆ. ಈ ಸಲ ಮೂವರು ಅಶಕ್ತಿರಗೆ ಸಂಗ್ರಹವಾದ ಹಣವನ್ನು ಹಂಚಲಿದ್ದಾರೆ.
ಕಳೆದ 9 ವರ್ಷದಲ್ಲಿ 130 ಮಕ್ಕಳಿಗೆ 1.28 ಕೋ.ರೂ. ನೆರವು ನೀಡಿದ ಸಾಧನೆ ಅವರದ್ದು. ಮಟ್ಟು ದಿನೇಶ್ ಅವರು ರವಿ ಕಟಪಾಡಿಯವರನ್ನು ಅವತಾರ್-2 ರೀತಿ ಅಲಂಕರಿಸಿದ್ದಾರೆ. ನಾಳೆ ಇಡೀ ದಿನ ರವಿ ಕಟಪಾಡಿ ಉಡುಪಿ ಆಸುಪಾಸು ಅವತಾರ್-2 ಅವತಾರದಲ್ಲಿ ಕಾಣಸಿಗಲಿದ್ದಾರೆ.