ಪುತ್ತೂರು: ಸಿ.ಎಂ.ಸಿದ್ಧರಾಮಯ್ಯರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ರಾಜ್ಯಪಾಲರ ನಡೆಯ ವಿರುದ್ಧ ಎಂಎಲ್‍ಸಿ ಐವನ್ ಡಿ’ಸೋಜಾ ಅವರು ನೀಡಿದ ಹೇಳಿಕೆಯನ್ನು ತಿರುಚಿರುವ ಬಿಜೆಪಿಯವರ ಗೂಂಡಾ ಸಂಸ್ಕೃತಿಯನ್ನು ಪುತ್ತೂರು ಕ್ರಿಶ್ಚಿಯನ್ ಯೂನಿಯನ್ ತೀವ್ರವಾಗಿ ಖಂಡಿಸುತ್ತದೆ ಎಂದು ಕ್ರಿಶ್ಚಿಯನ್ ಯೂನಿಯನ್ ಅಧ್ಯಕ್ಷ ಮೌರಿಸ್ ಮಸ್ಕರೇನಸ್ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯ ಏಕೈಕ ಎಂಎಲ್ ಸಿ ಅವರ ಮನೆ ಮೇಲೆ ಕಲ್ಲೂ ತೂರಾಟ ಮಾಡಿರುವುದು ಭಯೋತ್ಪಾದಕ ಕೃತ್ಯವಾಗಿದೆ ಎಂದು ಆರೋಪಿಸಿರುವ ಅವರು, ಈ ಘಟನೆಯಲ್ಲಿ ಪಾಲ್ಗೊಂಡ ಆರೋಪಿಗಳನ್ನು ಹಾಗೂ ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎಂಬುದನ್ನು ಸಾರ್ವಜನಿಕವಾಗಿ ಪೊಲೀಸ್ ಇಲಾಖೆ ಬಹಿರಂಗಪಡಿಸಬೇಕು. ಈ ಘಟನೆಯನ್ನು ಕೂಲಂಕುಷವಾಗಿ ತನಿಖೆ ನಡೆಸಿ ಆರೋಪಿಗಳ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸಂವಿಧಾನ ರಕ್ಷಣೆ ಮಾಡಬೇಕಾದ ರಾಜ್ಯಪಾಲರು ಸಂವಿಧಾನಕ್ಕೆ ವಿರುದ್ಧವಾಗಿ ವರ್ತಿಸಿದ್ದಾರೆ. ಈ ಕುರಿತು ಐವನ್ ಡಿ’ಸೋಜಾ ಅವರು ಬಾಂಗ್ಲಾ ಪ್ರಧಾನಿಗೆ ಬಂದ ಗತಿ ಬರಲಿದೆ ಎಂದು ಹೇಳಿಕೆ ನೀಡಿರುವುದಲ್ಲಿ ಏನು ತಪ್ಪಿದೆ ಎಂದು ಪ್ರಶ್ನಿಸಿದ ಅವರು, ಐವನ್ ಡಿ’ಸೋಜಾ ಕುರಿತು ಹೇಳಿಕೆ ನೀಡುವ ನೈತಿಕತೆ ಬಿಜೆಪಿ ನಾಯಕರಿಗಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ರಿಶ್ಚಿಯನ್ ಯೂನಿಯನ್ ನ ಪದಾಧಿಕಾರಿಗಳಾದ ವಲೇರಿಯನ್ ಡಯಾಸ್, ಕ್ಯಾನ್ಯೂಟ್ ಮಸ್ಕರೇನಸ್, ಜೋಕಿಂ ಲೂಯಿಸ್, ವಾಲ್ಟರ್ ಸಿಕ್ವೇರಾ ಉಪಸ್ಥಿತರಿದ್ದರು.