ಹೊಸದಿಲ್ಲಿ: ರಜೆ ಸಿಗಲಿ ಎಂದು ಮೂವರು ಅಪ್ರಾಪ್ತ ಬಾಲಕರು ಸೇರಿ ಮದರಸದಲ್ಲಿ ಓದುತ್ತಿದ್ದ ಐದು ವರ್ಷದ ಬಾಲಕನನ್ನು ಕೊಂದು ಹಾಕಿದ ಆಘಾತಕಾರಿ ಘಟನೆ ದಿಲ್ಲಿಯಲ್ಲಿ ಸಂಭವಿಸಿದೆ. ಈಶಾನ್ಯ ದಿಲ್ಲಿಯಲ್ಲಿರುವ ಮದರಸದಲ್ಲಿ ಬಾಲಕ ಕಲಿಯುತ್ತಿದ್ದ. ಈತನ ಮೇಲೆ 9 ರಿಂದ 11 ವರ್ಷದೊಳಗಿನ ಮೂರು ಬಾಲಕರು ಹಲ್ಲೆ ಮಾಡಿದ್ದಾರೆ. ಯಾರಾದರೂ ಸತ್ತರೆ ಮದರಸಕ್ಕೆ ರಜೆ ಕೊಡುತ್ತಾರೆ ಎಂದು ಭಾವಿಸಿ ಅವರು 5 ವರ್ಷದ ಬಾಲಕನನ್ನೇ ಹಲ್ಲೆ ಮಾಡಿ ಸಾಯಿಸಿದ್ದರು.
ಕೊಲೆಯಾದ ಬಾಲಕನನ್ನು ಐದು ತಿಂಗಳ ಹಿಂದಷ್ಟೇ ಈ ಮದರಸಕ್ಕೆ ಸೇರಿಸಿದ್ದರು. ಕೊಲೆಗೆ ಕಾರಣರಾದ ಅಪ್ರಾಪ್ತ ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಬಾಲಕನ ದೇಹದ ಹಲವೆಡೆ ಹಲ್ಲೆಯಿಂದ ಗಾಯಗಳಾಗಿವೆ. ಈ ಮದರಸದ ಪ್ರಾಂಶುಪಾಲ ಹಾಜಿ ದಿನ್ ಮೊಹಮ್ಮದ್ ಮೊದಲಿಗೆ ಪೊಲೀಸರಿಗೆ ನೀಡಿದ ಮಾಹಿತಿಯಲ್ಲಿ ಬಾಲಕ ಚರ್ಮದ ಕಾಯಿಲೆಯಿಂದ ಸಾವನ್ನಪ್ಪಿದ್ದಾನೆ ಎಂದು ಸುಳ್ಳು ಹೇಳಿದ್ದರು. ಆದರೆ ನಂತರ ನಡೆದ ಮರಣೋತ್ತರ ಪರೀಕ್ಷೆ ವೇಳೆ ಬಾಲಕನ ದೇಹದ ಒಳಭಾಗದಲ್ಲೂ ಅನೇಕ ಕಡೆ ಗಾಯಗಳಾಗಿರುವುದು ಕಂಡು ಬಂತು. ಕಿಡ್ನಿಗೆ ಹಾನಿಯಾಗಿತ್ತು. ಕಿಬ್ಬೊಟ್ಟೆ ಹಾಗೂ ಬಲ ಶ್ವಾಸಕೋಶದಲ್ಲಿ ರಕ್ತಸ್ರಾವವಾಗಿತ್ತು.
ಮನೆ ಚಾಕರಿ ಜೀವನ ಸಾಗಿಸುತ್ತಿರುವ ತಾಯಿ ಮೂವರು ಮಕ್ಕಳಲ್ಲಿ ಚಿಕ್ಕವನನ್ನು ದಿಲ್ಲಿಯ ಮದರಸಕ್ಕೆ ಸೇರಿಸಿದ್ರರು. ಈ ಮಕ್ಕಳ ತಂದೆ ಅವರನ್ನು ಬಿಟ್ಟು ಬೇರೆ ಮಡುವೆಯಾಗಿದ್ದಾನೆ. ಶುಕ್ರವಾರ ರಾತ್ರಿ ಬಾಲಕನ ತಾಯಿಗೆ ಮದರಸದಿಂದ ಕರೆ ಬಂದಿದ್ದು, ನಿಮ್ಮ ಮಗನಿಗೆ ಹುಷಾರಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಬಾಲಕನ್ನು ಬ್ರಿಜ್‌ಪುರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು. ಬಳಿಕ ತನಿಖೆ ಆರಂಭಿಸಿದ ಪೊಲೀಸರು ಮದರಸದ ಸಿಸಿಟಿವಿಯನ್ನು ಪರಿಶೀಲಿಸಿದಾಗ ಶುಕ್ರವಾದ ಮಧ್ಯಾಹ್ನ ಬಾಲಕನನ್ನು ಇತರ ಮೂವರು ಬಾಲಕರು ಥಳಿಸುತ್ತಿರುವ ದೃಶ್ಯ ಸೆರೆ ಆಗಿದೆ.
ಆರೋಪಿ ಬಾಲಕರು ಯಾರಾದರೂ ಸತ್ತರೆ ಪ್ರಿನ್ಸಿಪಾಲ್ ಎಲ್ಲರನ್ನು ಮನೆಗೆ ಕಳುಹಿಸಬಹುದು ಎಂದು ಭಾವಿಸಿದ್ದರು. ಹೀಗಾಗಿ ಬಾಲಕನ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.