ಕೊಚ್ಚಿ : ಸಿನಿಮಾ ಸೆಟ್ಗಳಲ್ಲಿ ಅವಘಡಗಳು, ಅಪಘಾತಗಳಾಗುವುದು ಸಾಮಾನ್ಯ ವಿಚಾರ. ಸ್ಟಂಟ್, ರೋಪ್, ಡ್ಯಾನ್ಸ್, ಆಕ್ಷನ್, ದೊಡ್ಡ ದೊಡ್ಡ ಸೆಟ್, ಬೆಂಕಿ ಇನ್ನೂ ಹಲವು ಅಪಾಯಕಾರಿ ಶೂಟಿಂಗ್ ಮಾಡುವಾಗ ಅವಘಡ ಸಂಭವಿಸುತ್ತದೆ. ನಟ-ನಟಿಯರು ಗಾಯಗೊಂಡಾಗ ಕೆಲ ದಿನ ವಿಶ್ರಾಂತಿ ತೆಗೆದುಕೊಂಡು ಶೂಟಿಂಗ್ಗೆ ಮರಳುತ್ತಾರೆ. ಆದರೆ ಮಲಯಾಳಂ ನಟಿಯೊಬ್ಬರು ಮಾತ್ರ ಸೆಟ್ನಲ್ಲಿ ಗಾಯವಾಗಿದ್ದಕ್ಕೆ ಪರಿಹಾರವಾಗಿ 5.75 ಕೋಟಿ ರೂ. ಕೊಡಬೇಕೆಂದು ನಿರ್ಮಾಪಕರ ವಿರುದ್ಧ ಕೇಸ್ ಹಾಕಿದ್ದಾರೆ.
ಮಲಯಾಳಂ ನಟಿ ಶೀತಲ್ ತಂಬಿ ಎಂಬುವರು ಮಲಯಾಳಂನ ಜನಪ್ರಿಯ ನಟಿ ಮಂಜು ವಾರಿಯವರ್ ವಿರುದ್ಧ ಪರಿಹಾರವಾಗಿ 5.75 ಕೋಟಿ ರೂ. ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಶೀತಲ್ ತಂಬಿ, ‘ಫೂಟೇಜ್’ ಎಂಬ ಮಲಯಾಳಂ ಕ್ರೈಂ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸುತ್ತಿದ್ದರು. ಸಿನಿಮಾದ ಆಕ್ಷನ್ ದೃಶ್ಯದ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಅವಘಡದಲ್ಲಿ ಶೀತಲ್ಗೆ ಗಾಯವಾಗಿದೆ. ಚಿತ್ರೀಕರಣದ ಸಮಯದಲ್ಲಿ ಸೂಕ್ತ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿರದ ಕಾರಣ ತಮಗೆ ಗಾಯವಾಗಿದೆ. ಆಂಬುಲೆನ್ಸ್ ಸೇವೆ ಸಹ ನೀಡಲಾಗಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಗಾಯದಿಂದ ತಮ್ಮ ವೃತ್ತಿ ಜೀವನಕ್ಕೆ ಸಮಸ್ಯೆ ಆಗಿದ್ದು, ಇನ್ನು ಮುಂದೆ ನಟಿಸಲು ನನಗೆ ಸಾಧ್ಯ ಆಗದೇ ಹೋಗಬಹುದು. ಹಾಗಾಗಿ ಪರಿಹಾರವಾಗಿ 5.75 ಕೋಟಿ ರೂ. ನೀಡಬೇಕು ಎಂದು ಒತ್ತಾಯಿಸಿದ್ದಾರೆ. ನಟಿ ಮಂಜು ವಾರಿಯರ್ ‘ಫೂಟೇಜ್’ ಸಿನಿಮಾದ ಸಹ ನಿರ್ಮಾಪಕಿ ಆಗಿರುವ ಕಾರಣ ದೂರಿನಲ್ಲಿ ಅವರ ಹೆಸರನ್ನು ಉಲ್ಲೇಖಿಸಲಾಗಿದೆ.