ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಶಿಖರ ಧವನ್‌ ವಿದಾಯ

ಎರಡು ವರ್ಷಗಳಿಂದ ಅವಕಾಶಗಳಿಲ್ಲದೆ ಮೂಲೆಗುಂಪಾಗಿದ್ದ ಕ್ರಿಕೆಟರ್‌

ಹೊಸದಿಲ್ಲಿ: ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. 38 ವರ್ಷದ ಧವನ್ ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದು, ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್ ಬೈ ಹೇಳುತ್ತಿರುವುದಾಗಿ ತಿಳಿಸಿದ್ದಾರೆ. ಶಿಖರ್ ಧವನ್ ಕೊನೆಯ ಬಾರಿಗೆ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದು 2022ರಲ್ಲಿ.

2022ರ ಬಾಂಗ್ಲಾದೇಶ ಪ್ರವಾಸದ ನಂತರ ಧವನ್ ಭಾರತ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಅದಾಗ್ಯೂ ಅವರು ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ಅದರಲ್ಲೂ ದುಲೀಪ್ ಟ್ರೋಫಿಗೆ ಆಯ್ಕೆ ಮಾಡಲಾದ ನಾಲ್ಕು ತಂಡಗಳಲ್ಲೂ ಅವರ ಹೆಸರು ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ನಿವೃತ್ತಿ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.































 
 

ನನ್ನ ಕ್ರಿಕೆಟ್ ಪಯಣದ ಈ ಅಧ್ಯಾಯವನ್ನು ಮುಕ್ತಾಯಗೊಳಿಸುತ್ತಿದ್ದೇನೆ. ಈ ಪ್ರಯಾಣದಲ್ಲಿ ನಾನು ನನ್ನೊಂದಿಗೆ ಅಸಂಖ್ಯಾತ ನೆನಪುಗಳು ಮತ್ತು ಕೃತಜ್ಞತೆಯನ್ನು ಹೊಂದಿದ್ದೇನೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು! ಜೈ ಹಿಂದ್! ಎಂದು ಧವನ್ ವಿಡಿಯೋದಲ್ಲಿ ಹೇಳಿದ್ದಾರೆ.

ಭಾರತಕ್ಕಾಗಿ ಆಡುವ ಆಶೆಯನ್ನು ನಾನು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಂಡಿದ್ದೆ. ನಾನು ಅದನ್ನು ಸಾಧಿಸಿದೆ. ಇದಕ್ಕಾಗಿ ಬಹಳಷ್ಟು ಜನರಿಗೆ ಧನ್ಯವಾದಗಳು. ಮೊದಲನೆಯದಾಗಿ ನನ್ನ ಕುಟುಂಬ, ನನ್ನ ಬಾಲ್ಯದ ಕೋಚ್ ತಾರಕ್ ಸಿನ್ಹಾ ಮತ್ತು ಮದನ್ ಶರ್ಮಾ ಅವರ ಮಾರ್ಗದರ್ಶನದಲ್ಲಿ ನಾನು ಕ್ರಿಕೆಟ್ ಕಲಿತೆ. ನಂತರ ನಾನು ವರ್ಷಗಳ ಕಾಲ ಆಡಿದ ನನ್ನ ಇಡೀ ತಂಡ ಮತ್ತೊಂದು ಕುಟುಂಬದಿಂದ ಖ್ಯಾತಿ ಮತ್ತು ಎಲ್ಲರ ಪ್ರೀತಿ ಮತ್ತು ಬೆಂಬಲ ಸಿಕ್ಕಿತು. ಜೀವನದಲ್ಲಿ ಮುನ್ನಡೆಯಲು ಪುಟವನ್ನು ತಿರುಗಿಸುವುದು ಮುಖ್ಯ. ಅದಕ್ಕಾಗಿಯೇ ನಾನು ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು ಶಿಖರ್ ಧವನ್ ತಿಳಿಸಿದ್ದಾರೆ.

2010ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ನಂತರ ಧವನ್ ಟೀಮ್ ಇಂಡಿಯಾ ಪರ 167 ಒಡಿಐ ಪಂದ್ಯಗಳನ್ನು ಆಡಿದ್ದು, ಈ ವೇಳೆ 17 ಶತಕ ಸೇರಿದಂತೆ 6793 ರನ್ ಗಳಿಸಿದ್ದಾರೆ. ಹಾಗೆಯೇ ಭಾರತದ ಪರ 34 ಟೆಸ್ಟ್ ಪಂದ್ಯಗಳಲ್ಲಿ 58 ಇನಿಂಗ್ಸ್ ಆಡಿರುವ ಧವನ್ 7 ಶತಕ ಹಾಗೂ 5 ಅರ್ಧಶತಕಗಳೊಂದಿಗೆ 2315 ರನ್ ಕಲೆಹಾಕಿದ್ದಾರೆ. ಇನ್ನು 68 ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ ಶಿಖರ್ ಧವನ್ 11 ಅರ್ಧಶತಕಗಳೊಂದಿಗೆ ಒಟ್ಟು 1759 ರನ್ ಬಾರಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವ ಶಿಖರ್ ಧವನ್ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮುಂದುವರಿಯಲಿದ್ದಾರೆ. ಪ್ರಸ್ತುತ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿರುವ ಧವನ್ ಈ ಬಾರಿಯ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ ಅವರನ್ನು ಈ ಬಾರಿ ಪಂಜಾಬ್ ಕಿಂಗ್ಸ್ ರಿಟೈನ್ ಮಾಡಿಕೊಳ್ಳುವ ಸಾಧ್ಯತೆಯಿಲ್ಲ. ಹೀಗಾಗಿ ಈ ಬಾರಿಯ ಮೆಗಾ ಹರಾಜಿನ ಮೂಲಕ ಶಿಖರ್ ಧವನ್ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಒಂದು ವೇಳೆ ಈ ಬಾರಿ ಚಾನ್ಸ್ ಸಿಗದಿದ್ದರೆ ಅವರು ಐಪಿಎಲ್​ಗೂ ವಿದಾಯ ಹೇಳುವ ಸಾಧ್ಯತೆ ಹೆಚ್ಚಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top