ಹೃದಯ ವಿದ್ರಾವಕ ಅರುಣಾ ಶಾನುಭಾಗ್ ಕಥೆ

ಕೋಲ್ಕತದಲ್ಲಿ ಮೊನ್ನೆ ಓರ್ವ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯ ಪ್ರಕರಣದ ಸುದ್ದಿ ಸ್ಫೋಟವಾಗಿ ಇಡೀ ಭಾರತ ನ್ಯಾಯಕ್ಕಾಗಿ ಹೋರಾಡಿ ಬೀದಿಗೆ ಇಳಿದ ಘಟನೆ ನಡೆಯಿತು.

ಅದೇ ರೀತಿಯಾಗಿ, ಅದಕ್ಕಿಂತ ಬರ್ಬರವಾದ ಒಂದು ಅತ್ಯಾಚಾರದ ಘಟನೆ 50 ವರ್ಷಗಳ ಹಿಂದೆ ಮುಂಬಯಿಯಲ್ಲಿ ನಡೆದಿತ್ತು. ಅದಕ್ಕೆ ಬಲಿಯಾದವರು ಬಹಳ ದೊಡ್ಡ ಕನಸು ಹೊತ್ತಿದ್ದ ಓರ್ವ ಸ್ಟಾಫ್ ನರ್ಸ್.

ಆಕೆ ಅರುಣಾ ಶಾನುಭೋಗ್‌





























 
 

ಹುಟ್ಟಿದ ಊರು ಉತ್ತರ ಕನ್ನಡ ಜಿಲ್ಲೆಯ ಹಳದಿಪುರ (1948). ಸ್ವಾಭಿಮಾನದ ಸಾರಸ್ವತ ಕುಟುಂಬ ಆಕೆಯದ್ದು. ಮಾತೃಭಾಷೆ ಕೊಂಕಣಿ. ನರ್ಸ್ ಆಗಿ ಸೇವೆ ಸಲ್ಲಿಸಬೇಕು ಎಂದು ಕನಸು ಹೊತ್ತು ನರ್ಸಿಂಗ್ ಕೋರ್ಸ್ ಮಾಡಿದಾಕೆ ಅರುಣಾ. ಮುಂದೆ ಆಕೆ ಕೆಲಸಕ್ಕೆ ಸೇರಿದ್ದು ಮುಂಬಯಿಯ ಪರೆಲ್ ಎಂಬಲ್ಲಿ ಇದ್ದ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ. ಕೆಲವೇ ದಿನಗಳಲ್ಲಿ ಆಕೆಯ ಪರಿಚಯ ಆಸ್ಪತ್ರೆಯ ಎಲ್ಲರಿಗೂ ಆಗಿತ್ತು ಅಂದರೆ ಅದಕ್ಕೆ ಕಾರಣ ಆಕೆಯ ಸೇವಾ ಮನೋಭಾವ, ಸೌಂದರ್ಯ ಮತ್ತು ಚುರುಕುತನ. ಆಕೆಯ ಗೆಜ್ಜೆಯ ಘಲ್ ಎಂಬ ಶಬ್ದ ಕೇಳಿದರೆ ರೋಗಿಗಳ ಮುಖದಲ್ಲಿ ನಗು ಚಿಮ್ಮುತ್ತಿತ್ತು. ಅಂತಹ ಅರುಣಾ ಬದುಕಿನಲ್ಲಿಯೂ ಒಂದು ಕರಾಳ ದಿನ ಬಂದೇ ಬಿಟ್ಟಿತು.

27 ನವೆಂಬರ್, 1973ರ ರಾತ್ರಿ

ಎಂದಿನಂತೆಯೇ ಡ್ಯೂಟಿ ಮುಗಿಸಿ ಆಸ್ಪತ್ರೆಯ ನೆಲ ಅಂತಸ್ತಿನ ತನ್ನ ಖಾಸಗಿ ಕೊಠಡಿಯಲ್ಲಿ ಡ್ರೆಸ್ ಬದಲಾವಣೆ ಮಾಡುತ್ತಿದ್ದ ಅರುಣಾ ಮೇಲೆ ಮಸುಕು ಕತ್ತಲೆಯಲ್ಲಿ ತೋಳದಂತೆ ಎರಗಿದ್ದ ಅದೇ ಆಸ್ಪತ್ರೆಯ ಓರ್ವ ಸ್ವೀಪರ್ ಸೋಹನ್ ಲಾಲ್. ಆಕೆ ಪ್ರತಿಭಟನೆ ಮಾಡಿದಾಗ ಆಕೆಯ ಧ್ವನಿ ಅಡಗಿಸಲು ನಾಯಿಯ ಗಟ್ಟಿಯಾದ ಸಂಕೋಲೆಯನ್ನು ಕುತ್ತಿಗೆಗೆ ಬಿಗಿದು ಕ್ರೂರವಾಗಿ ಅತ್ಯಾಚಾರ ಮಾಡಿಬಿಟ್ಟಿದ್ದ. ಆಗ ಆಕೆಯ ವಯಸ್ಸು ಕೇವಲ 25.
ದುರಂತ ಏನಾಯ್ತು ಎಂದರೆ ಆ ಬಲವಾದ ಕಬ್ಬಿಣದ ಸಂಕಲೆ ಕುತ್ತಿಗೆಗೆ ಬಿಗಿದ ಕಾರಣ ಮೆದುಳಿಗೆ ರಕ್ತ ಸಂಚಾರ ನಿಂತು ಹೋಯಿತು. ಬೆಳಿಗ್ಗಿನ ತನಕ ಆಕೆ ನರಳಲೂ ತ್ರಾಣ ಇಲ್ಲದೆ ಅರೆಪ್ರಜ್ಞಾವಸ್ಥೆಯಲ್ಲಿ ಅಲ್ಲಿಯೇ ಬಿದ್ದುಕೊಂಡಿದ್ದಳು. ಮರುದಿನ ಬೆಳಗ್ಗೆ ಕಸಗುಡಿಸಲು ಬಂದ ಓರ್ವ ಮಹಿಳೆ ಬೊಬ್ಬೆ ಹೊಡೆದು ಜನ ಸೇರಿಸಿ ಆಕೆಯನ್ನು ತುರ್ತುಚಿಕಿತ್ಸಾ ವಿಭಾಗಕ್ಕೆ ಸೇರಿಸಿದರು. ಆಗ ಆಕೆಯ ದೇಹದಲ್ಲಿ ಉಸಿರು ಇತ್ತು ಆದರೆ ಯಾವುದೇ ಸಂವೇದನೆ, ಭಾವನೆ ಇರಲಿಲ್ಲ. ಕಣ್ಣು ತೆರೆದು ಮರದ ಕೊರಡಿನ ಹಾಗೆ ಮಲಗಿದ್ದಳು.

ಪರ್ಸಿಸ್ಟೆಂಟ್ ವೇಜಿಟೆಟಿವ್ ಸ್ಟೇಟ್

ಮೆದುಳಿನ ಒಂದು ಭಾಗಕ್ಕೆ ತೀವ್ರವಾದ ಆಘಾತವಾದಾಗ ಉಂಟಾಗುವ ಆರೋಗ್ಯ ಸಮಸ್ಯೆ ಇದು. ಅರ್ಧ ಜೀವ, ಅರ್ಧ ಶವ ಅನ್ನುವ ದೈನೇಸಿ ಸ್ಥಿತಿ. ನಿಧಾನ ಉಸಿರಾಟ, ನಾಡಿ ಮಿಡಿತ, ಹೃದಯ ಬಡಿತ ಬಿಟ್ಟರೆ ಬೇರೆ ಯಾವ ಬದುಕಿನ ಲಕ್ಷಣಗಳೂ ಇಲ್ಲ. ಶೂನ್ಯದ ಕಡೆಗೆ ನೆಟ್ಟ ದೃಷ್ಟಿ ನೋಟ, ಭಾವನೆಗಳೇ ಇಲ್ಲದ ಮುಖ, ಸಂವೇದನೆಗಳೇ ಇಲ್ಲದ ದೇಹ. ದೇಹದ ಯಾವ ಭಾಗದಲ್ಲಿಯೂ ಚಲನೆ ಇಲ್ಲದ ಸ್ಥಿತಿ ಆಕೆಯದ್ದು. ಆಕೆ ಅದೇ ಸ್ಥಿತಿಯಲ್ಲಿ, ಅದೇ ಆಸ್ಪತ್ರೆಯ, ಅದೇ ಹಾಸಿಗೆಯಲ್ಲಿ 41 ವರ್ಷಗಳನ್ನು ಹಾಗೆಯೇ ಕಳೆದರು ಅಂದರೆ ಅದು ಎಷ್ಟೊಂದು ಹೃದಯವಿದ್ರಾವಕ ಎಂದು ಊಹೆ ಮಾಡಿಕೊಳ್ಳಿ.

ಆಸ್ಪತ್ರೆಯ ನರ್ಸುಗಳು ಆಕೆಯ ಸೇವೆಗೆ ನಿಂತರು

ಆಕೆಯ ಊರಿನ ಅಥವಾ ಸಂಬಂಧಿಕರ ಸಂಪರ್ಕವೇ ಇಲ್ಲದ ಸಂದರ್ಭ ಅದೇ ಎಡ್ವರ್ಡ್ ಆಸ್ಪತ್ರೆಯ ನರ್ಸುಗಳು ಆಕೆಯನ್ನು ಪುಟ್ಟ ಮಗುವಿನ ಹಾಗೆ ನೋಡಿಕೊಂಡರು. ಹಲವಾರು ಜನ ಸೇರಿ ಚಿಕಿತ್ಸೆಯ ವೆಚ್ಚವನ್ನು ಭರಿಸಿದರು. ಪ್ರತಿ ದಿನವೂ ಆಕೆಯನ್ನು ಖುಷಿಯಾಗಿಡುವ ಎಲ್ಲ ಪ್ರಯತ್ನವನ್ನೂ ಮಾಡಿದರು. ವರ್ಷವೂ ಆಕೆಯ ಹುಟ್ಟುಹಬ್ಬ ಆಚರಣೆ ಮಾಡಿದರು. ಅದೇ ಹೊತ್ತಿನಲ್ಲಿ ದೇಶದಾದ್ಯಂತ ದಯಾಮರಣದ ಬಗ್ಗೆ ಚರ್ಚೆ ಆಗಿ ಅದನ್ನು ಸುಪ್ರೀಂ ಕೋರ್ಟ್ ಕೈಗೆ ಎತ್ತಿಕೊಂಡರೂ ಆ ನರ್ಸುಗಳು ಆಕೆಯನ್ನು ಜೀವಂತವಾಗಿ ಇಡುವ ಎಲ್ಲ ಪ್ರಯತ್ನವನ್ನೂ ಮಾಡಿದರು ಅನ್ನೋದು ಮಾನವೀಯತೆಯ ವಿಶ್ವರೂಪ ಎಂದು ನನ್ನ ಭಾವನೆ.

ಸೋಹನ್‌ಲಾಲ್‌

ಕೊಲೆಗಡುಕನಿಗೆ ಶಿಕ್ಷೆ ಆಯಿತಾ?

ಅದು ಸೋಷಿಯಲ್ ಮೀಡಿಯಾ ಕಾಲ ಅಲ್ಲ. ಕ್ಯಾಂಡಲ್ ಮಾರ್ಚ್, ಪ್ರತಿಭಟನೆ ಯಾವುದೂ ದೊಡ್ಡ ಮಟ್ಟದಲ್ಲಿ ನಡೆಯಲಿಲ್ಲ. ಆದರೂ ಅತ್ಯಾಚಾರಿ ಸೋಹನ್ ಲಾಲ್ ಬಂಧನ ಆಯಿತು. ಕೋರ್ಟಿನಲ್ಲಿ ವಾದ, ಪ್ರತಿವಾದ ಜೋರಾಗಿಯೇ ನಡೆದವು. ಸಾಕ್ಷಿಗಳ ಕೊರತೆ ಒಂದೆಡೆ ಆದರೆ ಎಡ್ವರ್ಡ್ ಆಸ್ಪತ್ರೆಯ ಅಸಹಕಾರ (ಅವರು ತಮ್ಮ ಆಸ್ಪತ್ರೆಯ ರೆಪ್ಯೂಟೇಶನ್ ಬಗ್ಗೆ ಹೆದರಿರಬೇಕು)ಗಳಿಂದ ಅತ್ಯಾಚಾರ ಕೇಸ್ ಬಿಗು ಆಗಲೇ ಇಲ್ಲ. ಅವನು ನಮ್ಮ ಸಿಬ್ಬಂದಿಯೇ ಅಲ್ಲ ಎಂದಿತು ಆಸ್ಪತ್ರೆ. ಪರಿಣಾಮವಾಗಿ ಅವನಿಗೆ ಏಳು ವರ್ಷಗಳ ಲಘುವಾದ ಶಿಕ್ಷೆ ಆಯಿತು. ಆತನು ಆ ಶಿಕ್ಷೆಯನ್ನು ಮುಗಿಸಿ ರಾಜಾರೋಷವಾಗಿ ಹೊರಗೆ ಬಂದು ಉತ್ತರಪ್ರದೇಶದ ಒಂದು ಹಳ್ಳಿಗೆ ಹೋಗಿ, ಅಲ್ಲಿ ಮದುವೆಯಾಗಿ ನೆಮ್ಮದಿಯಿಂದ ಬದುಕಿದನು ಎಂದು ಮುಂದೆ ಮಾಧ್ಯಮಗಳು ವರದಿ ಮಾಡಿದವು. ಪಿಂಕಿ ವಿರಾನಿ ಎಂಬ ಪತ್ರಕರ್ತೆ ಅರುಣಾಗೆ ನ್ಯಾಯ ಕೊಡಿಸಲು ಎಷ್ಟೋ ಪ್ರಯತ್ನಗಳನ್ನು ಮಾಡಿದರೂ ಸಫಲವಾಗಲಿಲ್ಲ ಅನ್ನೋದು ದುರಂತ.

ಅರುಣಾ ಏನಾದಳು?

42 ವರ್ಷಗಳ ಜೀವನ್ಮರಣದ ಹೋರಾಟದಲ್ಲಿ ನಲುಗಿದ ಅರುಣಾ 2015ರಲ್ಲಿ ನ್ಯುಮೋನಿಯಾ ಕಾಯಿಲೆಯಿಂದ ನಿಧನ ಹೊಂದಿದಳು. ಆಗ ಆಕೆಗೆ 66 ವರ್ಷ. ಅದೇ ನರ್ಸುಗಳು ಆಕೆಯ ಅಂತ್ಯಕ್ರಿಯೆ ಪೂರ್ತಿ ಮಾಡಿದರು. ಮುಂದೆ ಅದೇ ಪಿಂಕಿ ವಿರಾನಿ ಆಕೆಯ ಬದುಕಿನ ಬಗ್ಗೆ ‘ದ ಸ್ಟೋರಿ ಆಫ್ ಅರುಣಾ’ ಪುಸ್ತಕವನ್ನು ಬರೆದರು. ಅದು ಭಾರೀ ಜನಪ್ರಿಯ ಆಯಿತು. ‘ಕಥಾ ಅರುಣಾಚೀ’ ಎಂಬ ಮರಾಠಿ ನಾಟಕವೂ ವೇದಿಕೆಗೆ ಬಂದು ಕಣ್ಣೀರು ತರಿಸಿತು. ಗುಜರಾತಿ ಭಾಷೆಯಲ್ಲಿ ‘ಜಡ ಚೇತನ’ ಎಂಬ ಕಾದಂಬರಿ ಬಂದು ಪ್ರಶಸ್ತಿಯನ್ನು ಪಡೆಯಿತು. ಮಲಯಾಳಂ ಭಾಷೆಯಲ್ಲಿ ‘ಮರಂ ಪೇಯ್ಯಂಬೋಲ್’ ಎಂಬ ಸಿನಿಮಾ ಆಕೆಯ ಬದುಕನ್ನು ಆಧರಿಸಿ ಬಂದು ಬೆಳ್ಳಿತೆರೆಯನ್ನು ಏರಿತು.

ಅರುಣಾ ಅಮರತ್ವ ಪಡೆದಳು, ತನ್ನ ಸಾವಿಗೆ ನ್ಯಾಯ ಸಿಗಲಿಲ್ಲ ಎಂಬ ಕೊರಗು ಉಳಿಸಿಕೊಂಡು…

ರಾಜೇಂದ್ರ ಭಟ್ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top