ಮೈಸೂರು : ಮುಡಾ ಹಗರಣದಿಂದ ನುಣುಚಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಹೊಸ ಪಟ್ಟುಗಳನ್ನು ಹಾಕಿದರೂ ಹಗರಣದ ಸುಳಿ ಒಂದಲ್ಲ ಒಂದು ರೀತಿಯಲ್ಲಿ ಅವರನ್ನು ಬಲವಾಗಿ ಸುತ್ತಿಕೊಳ್ಳುತ್ತಿದೆ. ಹಗರಣಕ್ಕೆ ಸಂಬಂಧಿಸಿ ಸಲ್ಲಿಸಿದ ರಿಟ್ ಅರ್ಜಿಯಲ್ಲಿ ಸಿದ್ದರಾಮಯ್ಯ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ, ಮುಡಾ ಹಗರಣದ ದೂರುದಾರರಲ್ಲಿ ಒಬ್ಬರಾಗಿರುವ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ. ಇವರು ಸಿಎಂ ವಿರುದ್ಧ.
ಪತ್ನಿ ಪಾರ್ವತಿ ಮುಡಾಗೆ ಪತ್ರ ಬರೆದಿರುವುದು ಸಿದ್ದರಾಮಯ್ಯ ಅವರಿಗೆ ಮೊದಲೇ ಗೊತ್ತಿತ್ತು. ಸಿದ್ದರಾಮಯ್ಯ ಒಟ್ಟು 713 ಪುಟಗಳ ದಾಖಲೆ ಒಳಗೊಂಡ ರಿಟ್ ಅರ್ಜಿ ಹಾಕಿದ್ದಾರೆ. 531ನೇ ಪುಟವಾಗಿ ಪಾರ್ವತಿ ಬರೆದ ಅರ್ಜಿಯ ಮೊದಲ ಪುಟ ಇದೆ. ಆದರೆ 532ನೇ ಪುಟದಲ್ಲಿ ಪಾರ್ವತಿ ಅವರು ಬರೆದ ಪತ್ರದ ಎರಡನೇ ಪುಟ ಇಲ್ಲ ಎಂದು ಅವರು ದೂರಿದ್ದಾರೆ.
ಎರಡನೇ ಪುಟಕ್ಕೆ ವೈಟ್ನರ್ ಹಾಕಿ ಒಂದು ಸಾಲನ್ನು ಅಳಿಸಲಾಗಿದೆ. 532ನೇ ಪುಟದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ನಡಾವಳಿ ಪತ್ರ ಇದೆ. ವೈಟ್ನರ್ ಹಾಕಿ ಅಳಿಸಿರುವ ಕಾರಣಕ್ಕಾಗಿ ಎರಡನೇ ಪುಟ ಬಿಟ್ಟು ಕೇವಲ ಒಂದು ಪುಟ ಮಾತ್ರ ಕೋರ್ಟ್‌ಗೆ ಕೊಟ್ಟಿದ್ದಾರೆ. ಆ ಮೂಲಕ ರಾಜ್ಯದ ಜನರಿಗೆ ಹಾಗೂ ಕೋರ್ಟ್ ಮುಂದೆ ಸತ್ಯ ಮುಚ್ಚಿಡುತ್ತಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.
ರಾಜ್ಯಪಾಲರ ಶೋಕಾಸ್ ನೋಟಿಗೆ ನೀಡಿದ ಉತ್ತರದ 30ನೇ ಪುಟದಲ್ಲಿ ಪತ್ನಿ ಮುಡಾಗೆ ಪತ್ರ ಬರೆದ ಮಾಹಿತಿ ಕೊಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ನ್ಯಾಯಾಲಯಕ್ಕೆ ಸತ್ಯ ಮುಚ್ಚಿಟ್ಟಿರುವುದು ನ್ಯಾಯಾಂಗ ನಿಂದನೆಯಾಗುತ್ತದೆ. 29ರಂದು ವಿಚಾರಣೆಯ ಸಂದರ್ಭದಲ್ಲಿ ಎಲ್ಲ ವಿಚಾರವನ್ನು ನ್ಯಾಯಾಲದ ಗಮನಕ್ಕೆ ತರುತ್ತೇವೆ. ಸಿಎಂ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲು ಮಾಡುವಂತೆ ಮನವಿ ಮಾಡುತ್ತೇವೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ಮುಡಾ ಹಗರಣ ಬೆಳಕಿಗೆ ಬಂದ ಮೇಲೆ ಅಧಿಕಾರಿಗಳು ದಾಖಲೆಯನ್ನು ತಿರುಚಿದ್ದಾರೆಯೇ ಎಂಬ ಅನುಮಾನ ಬುಧವಾರವೇ ವ್ಯಕ್ತವಾಗಿತ್ತು. ಸಿದ್ದರಾಮಯ್ಯ ಪತ್ನಿ ತಮ್ಮ ಭೂಮಿಗೆ 50:50 ಅನುಪಾತದಲ್ಲಿ ಪರ್ಯಾಯ ನಿವೇಶನ ಕೊಡುವಂತೆ ಮನವಿ ಮಾಡಿ ಸಲ್ಲಿಸಿರುವ ಪತ್ರದಲ್ಲಿ ಯಾವ ಸ್ಥಳದಲ್ಲಿ ಪರ್ಯಾಯ ನಿವೇಶನ ಕೊಡಬೇಕು ಎಂದು ಬರೆದ ಜಾಗಕ್ಕೆ ವೈಟ್ನರ್ ಹಾಕಿರುವುದು ಬೆಳಕಿಗೆ ಬಂದಿತ್ತು.