ವಿಶಾಖಪಟ್ಟಣಂ: ಆಂಧ್ರ ಪ್ರದೇಶದ ಅನಕಪಲ್ಲಿ ಜಿಲ್ಲೆಯ ಫಾರ್ಮಾ ಕಂಪನಿಯೊಂದರಲ್ಲಿ ಬುಧವಾರ ಸಂಭವಿಸಿದ ರಿಯಾಕ್ಟರ್ ಸ್ಫೋಟ ದುರಂತದಲ್ಲಿ ಮಡಿದವರ ಸಂಖ್ಯೆ 17ಕ್ಕೇರಿದೆ. ಕನಿಷ್ಠ 30 ಕಾರ್ಮಿಕರು ಗಾಯಗೊಂಡಿದ್ದಾರೆ.
ಅನಕಪಲ್ಲಿ ಜಿಲ್ಲೆಯ ರಾಂಬಿಲ್ಲಿ ಮಂಡಲದ ಅಚ್ಯುತಪುರಂ ಎಸ್ಇಜೆಡ್ನಲ್ಲಿರುವ ಎಸ್ಸೆಂಟಿಯಾ ಅಡ್ವಾನ್ಸ್ಡ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ಬುಧವಾರ ಮಧ್ಯಾಹ್ನ ರಿಯಾಕ್ಟರ್ ಸ್ಫೋಟಗೊಂಡಿದೆ.
ಸ್ಫೋಟದ ಪರಿಣಾಮ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ 17 ಮಂದಿ ಮೃತಪಟ್ಟಿದ್ದಾರೆ ಮತ್ತು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಟ್ಟ ಹೊಗೆಯಿಂದಾಗಿ ಉಸಿರುಕಟ್ಟಿ ಹಲವು ಕಾರ್ಮಿಕರು ಮೃತಪಟ್ಟಿದ್ದಾರೆ.
ಈ ಕಾರ್ಖಾನೆಯಲ್ಲಿ ಎರಡು ಪಾಳಿಗಳಲ್ಲಿ 350ಕ್ಕೂ ಅಧಿಕ ಕಾರ್ಮಿಕರು ದುಡಿಯುತ್ತಾರೆ. ಸ್ಫೋಟದ ಬಿರುಸಿಗೆ ಕಾರ್ಖಾನೆಯ ಮಹಡಿಯ ಸೂರು ಕುಸಿದು ಬಿದ್ದು, ಇದರಡಿಯಲ್ಲಿ ಹಲವರು ಸಿಲುಕಿಕೊಂಡಿದ್ದರು.