ದುಬೈ : ಬಾಂಗ್ಲಾದೇಶದಲ್ಲಿ ರಾಜಕೀಯ ದಂಗೆಯಿಂದ ಪರಿಸ್ಥಿತಿ ಪ್ರಕುಬ್ಧಗೊಂಡಿರುವ ಹಿನ್ನೆಲೆಯಲ್ಲಿ ಆ ದೇಶದಲ್ಲಿ ಈ ವರ್ಷಾಂತ್ಯದಲ್ಲಿ ನಡೆಯಬೇಕಿದ್ದ ಮಹಿಳಾ ಟಿ20 ವಿಶ್ವಕಪ್ ಟೂರ್ನಮೆಂಟನ್ನು ಯುಎಇಗೆ ಸ್ಥಳಾಂತರಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಿಳಿಸಿದೆ. ಮಂಗಳವಾರ ನಡೆದ ಐಸಿಸಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಅದರಂತೆ ಈ ಬಾರಿಯ ಮಹಿಳಾ ಟಿ20 ವಿಶ್ವಕಪ್ ಪಂದ್ಯಗಳು ದುಬೈ, ಶಾರ್ಜಾ ಸ್ಟೇಡಿಯಂಗಳಲ್ಲಿ ನಡೆಯಲಿವೆ.
ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ರಾಜಕೀಯ ದಂಗೆಗಳ ಬಳಿಕ ಆ ದೇಶದಲ್ಲಿ ಇನ್ನೂ ಸ್ಥಿರತೆ ನೆಲೆಯಾಗಿಲ್ಲ. ಹೀಗಾಗಿ ಟೂರ್ನಿಯನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಆದರೆ ಟೂರ್ನಿ ಆಯೋಜನೆಯ ಹಕ್ಕು ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಬಳಿಯೇ ಇರುತ್ತದೆ. ಈ ಮೂಲಕ ಯುಎಇನಲ್ಲಿ 9ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್ ಆಯೊಜಿಸಲು ಬಿಸಿಬಿಗೆ ಸೂಚಿಸಲಾಗಿದೆ ಎಂದು ಐಸಿಸಿ ತಿಳಿಸಿದೆ. ವಿಶ್ವ ದರ್ಜೆಯ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳನ್ನು ಹೊಂದಿರುವ ಕಾರಣ ಮಹಿಳಾ ಟಿ20 ವಿಶ್ವಕಪ್ ಅನ್ನು ಸಹ ಯುಎಇನಲ್ಲೇ ಆಯೋಜಿಸುವ ನಿರ್ಧಾರ ಐಸಿಸಿ ಕೈಗೊಂಡಿದೆ.
ಅ.3ರಿಂದ ಅ.20ರ ತನಕ ಎರಡು ಗುಂಪುಗಳಲ್ಲಿ ಮಹಿಳಾ ಟಿ20 ವಿಶ್ವಕಪ್ ಕೂಟ ನಡೆಯಲಿದೆ. ಎ ಗುಂಪಿನಲ್ಲಿ ಆಸ್ಟ್ರೇಲಿಯಾ, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಿ ಗುಂಪಿನಲ್ಲಿ ದಕ್ಷಿಣ ಆಫ್ರಿಕ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ಸ್ಕಾಟ್ಲೆಂಡ್ ತಂಡಗಳಿವೆ.