ಕೋಲ್ಕತ: ಟ್ರೈನಿ ವೈದ್ಯೆಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿದ ಘಟನೆಯ ಬಳಿಕ ಕುಖ್ಯಾತವಾಗಿರುವ ಕೋಲ್ಕತದ ಸರ್ಕಾರಿ ಆರ್‌ಜಿ ಕರ್ ಮೆಡಿಲ್ ಕಾಲೇಜಿನ ಒಂದೊಂದೇ ಕರ್ಮಕಾಂಡ ಬಯಲಿಗೆ ಬರುತ್ತಿದೆ. ವೈದ್ಯೆಯ ಹತ್ಯೆಯಾದ ಬಳಿಕ ರಾಜೀನಾಮೆ ನೀಡಿರುವ ಕಾಲೇಜಿನ ಪ್ರಾಂಶುಪಾಲ ಆಸ್ಪತ್ರೆಯಲ್ಲಿ ಮೃತಪಟ್ಟವರ ಶವಗಳನ್ನು ಮಾರಾಟ ಮಾಡುವಂಥ ಹೀನ ದಂಧೆಯನ್ನು ನಡೆಸುತ್ತಿದ್ದರು ಎಂದು ಈ ಆಸ್ಪತ್ರೆಯಲ್ಲಿ ಸುಪರಿಂಟೆಂಡ್ ಆಗಿದ್ದ ಅಖ್ತರ್ ಅಲಿ ಎಂಬವರು ಬಹಿರಂಗಪಡಿಸಿದ್ದಾರೆ.
ಆರ್‌ಜಿ ಕರ್ ಮೆಡಿಕಲ್ ಕಾಲೇಜಿಗೆ ಬರುತ್ತಿದ್ದ ಔಷಧ ಹಾಗೂ ವೈದ್ಯಕೀಯ ಉಪಕರಣಗಳನ್ನು ಬಾಂಗ್ಲಾದೇಶಕ್ಕೆ ಮಾರುತ್ತಿದ್ದರು. ಮೆಡಿಕಲ್ ವೇಸ್ಟನ್ನು ಕೂಡ ಮಾರಾಟ ಮಾಡಿ ಪ್ರಾಂಶುಪಾಲ ಸಂದೀಪ್ ಘೋಶ್ ಹಣ ಮಾಡುತ್ತಿದ್ದರು ಎಂದು ಅಖ್ತರ್ ಆರೋಪಿಸಿದ್ದಾರೆ.
2023ರಲ್ಲಿ ಅಖ್ತರ್ ಆರ್‌ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ಸುಪರಿಂಟೆಂಡ್ ಆಗಿದ್ದರು. ಆಗಲೇ ವಾರಿಸುದಾರರಿಲ್ಲದ ಹೆಣ ಮಾರಾಟ ಮಾಡುತ್ತಿದ್ದ ಕುರಿತು ಧ್ವನಿ ಎತ್ತಿದ್ದರು. ಆದರೆ ಅವರ ಧ್ವನಿಯನ್ನು ಅಡಗಿಸಲಾಗಿತ್ತು. ಮೆಡಿಕಲ್ ಕಾಲೇಜಿನಲ್ಲಿ ಬಹಳ ಕಾಲದಿಂದ ಅಕ್ರಮ ವ್ಯವಹಾರಗಳು ನಡೆಯುತ್ತಿದ್ದವು. ಇದನ್ನು ಪ್ರಶ್ನಿಸಿದವರಿಗೆ ಕಿರುಕುಳ ನೀಡುತ್ತಿದ್ದರು. ಪ್ರಾಂಶುಪಾಲ ಸಂದೀಪ್ ಘೋಶ್‌ಗೆ ಬಲವಾದ ರಾಜಕೀಯ ಬೆಂಬಲ ಇತ್ತು ಎಂದು ಸಂದರ್ಶನವೊಂದರಲ್ಲಿ ಅಖ್ತರ್ ಹೇಳಿಕೊಂಡಿದ್ದಾರೆ.
ಅವ್ಯವಹಾರಗಳ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಿದ ದಿನವೇ ಅಖ್ತರ್ ಅವರನ್ನು ಅಲ್ಲಿಂದ ವರ್ಗಾಯಿಸಿದ್ದಾರಂತೆ. ಸಂದೀಪ್ ಘೋಶ್‌ರಿಂದ ಈ ಮೆಡಿಕಲ್ ಕಾಲೇಜಿನಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳನ್ನು ಉಳಿಸಲು ಸಾಧ್ಯವಾದಷ್ಟು ಪ್ರಯತ್ನಿಸಿದ್ದೆ. ಆದರೆ ಕೊನೆಗೆ ತನಿಖೆ ಮಾಡಿದ ಸಮಿತಿಯ ಸದಸ್ಯರೆಲ್ಲ ವರ್ಗವಾಗಿ ಹೋಗುವುದನ್ನು ನೋಡಬೇಕಾಯಿತು. ನನ್ನನ್ನೂ ವರ್ಗಾಯಿಸಿದರು ಎಂದು ಅವರು ಹೇಳಿಕೊಂಡಿದ್ದಾರೆ.
ಆಸ್ಪತ್ರೆಯ ಎಲ್ಲ ಟೆಂಡರ್‌ಗಳಲ್ಲಿ ಘೋಶ್‌ಗೆ ಶೇ.20 ಕಮಿಷನ್ ಹೋಗುತ್ತಿತ್ತು. ಅವರಿಗೆ ಆಪ್ತರಾಗಿರುವ ಇಬ್ಬರಿಗೆ ಮಾತ್ರ ಟೆಂಡರ್‌ಗಳು ಸಿಗುತ್ತಿದ್ದವು. ಹಣ ಕೊಡದೆ ಘೋಶ್ ಯಾವ ಕಡತಗಳಿಗೂ ಸಹಿ ಹಾಕುತ್ತಿರಲಿಲ್ಲ ಎಂದು ಅಖ್ತರ್ ಬಹಿರಂಗಪಡಿಸಿದ್ದಾರೆ.