*ಸಿಎಂ ಪರ ಬ್ಯಾಟಿಂಗ್‌ಗೆ ಅತ್ಯಾಪ್ತರ ಬಳಗ ಸಿದ್ಧತೆ
ಬೆಂಗಳೂರು : ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿದ ಬಳಿಕ ಕಂಗೆಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮತ್ತೊಮ್ಮೆ ಹೈಕಮಾಂಡ್ ಮುಂದೆ ಹೋಗಿ ತನ್ನನ್ನು ಸಮರ್ಥಿಸಿಕೊಳ್ಳಲು ತೀರ್ಮಾನಿಸಿದ್ದಾರೆ. ಹೈಕೋರ್ಟ್ ಸದ್ಯಕ್ಕೆ ರಿಲೀಫ್ ನೀಡಿದ್ದರೂ ಇದು ತಾತ್ಕಾಲಿಕವಷ್ಟೆ. ಆ.29ರ ವಿಚಾರಣೆಯಲ್ಲಿ ಹೈಕೋರ್ಟ್ ತನಿಖೆಗೆ ಅನುಮತಿ ನೀಡಿದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ. ಹೀಗಾಗಿ ಸಿದ್ದರಾಮಯ್ಯನವರು ಇದಕ್ಕೂ ಮೊದಲೇ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಮುಂದಿನ ನಡೆಯ ಬಗ್ಗೆ ಚರ್ಚಿಸಲಿದ್ದಾರೆ. ಈ ವೇಳೆ ತನ್ನ ಅತ್ಯಾಪ್ತ ಬಳಗದ ಕೆಲವು ಸಚಿವರ ಬೆಂಬಲವನ್ನೂ ಪಡೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಸಿಎಂ ಸಿದ್ದರಾಮಯ್ಯ ಶುಕ್ರವಾರ ದಿಲ್ಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲಿದ್ದಾರೆ. ಈ ಮಧ್ಯೆ ಸಿದ್ದರಾಮಯ್ಯ ಪರ ಹೈಕಮಾಂಡ್ ಬಳಿ ಪ್ರಬಲ ವಾದ ಮಂಡಿಸಲು ಅವರ ಆಪ್ತ ಸಚಿವರು ಸಿದ್ಧತೆ ಮಾಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್‌ನ ಭವಿಷ್ಯ ಭದ್ರವಾಗಿರಲು ಪಕ್ಷಕ್ಕೆ ಸಿದ್ದರಾಮಯ್ಯ ಅನಿವಾರ್ಯ. ಹೀಗಾಗಿ ಹೈಕಮಾಂಡ್ ಅವರ ಪರವಾಗಿ ನಿಲ್ಲಬೇಕು. ಇಲ್ಲವಾದಲ್ಲಿ ಕರ್ನಾಟಕದ ಬಳಿಕ ತೆಲಂಗಾಣದ ಸರ್ಕಾರಕ್ಕೂ ಸಂಕಷ್ಟ ತರುತ್ತಾರೆ ಎಂದು ಸಿದ್ದರಾಮಯ್ಯ ಆಪ್ತ ಸಚಿವರು ವಾದಿಸುತ್ತಿದ್ದಾರೆ.
ಒಂದು ವೇಳೆ ಸಿಎಂ ವಿರುದ್ಧ ಎಫ್ಐಆರ್ ದಾಖಲಾಗಿ ತನಿಖೆ ಶುರು ಮಾಡಿದರೂ ಹೈಕಮಾಂಡ್ ಅವರ ಪರ ನಿಲ್ಲಬೇಕು. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಮಾಡಬಾರದು ಎಂದು ಸಚಿವರು ವಾದಿಸುತ್ತಿರುವುದಾಗಿ ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಬೆನ್ನಿಗೆ ಸಚಿವರು ನಿಲ್ಲದಿದ್ದರೆ ಇಡೀ ವ್ಯವಸ್ಥೆಯೇ ಹಾಳಾಗಬಹುದು. ಸಿದ್ದರಾಮಯ್ಯನವರನ್ನು ಪಟ್ಟದಿಂದ ಇಳಿಸಿದರೆ ಹಾಲಿ ಹಾಗೂ ಮುಂದಿನ ರಾಜಕೀಯ ಲೆಕ್ಕಾಚಾರಗಳೆಲ್ಲ ಏರುಪೇರಾಗಬಹುದು. ಹೀಗಾಗಿ, ಸಿದ್ದರಾಮಯ್ಯ ಭದ್ರವಾಗಿ ಅಧಿಕಾರದಲ್ಲಿ ಇದ್ದರೆ ಕ್ಯಾಬಿನೆಟ್ಗೂ ಉಳಿಗಾಲ. ಸಿದ್ದರಾಮಯ್ಯರನ್ನು ಹೈಕಮಾಂಡ್ ಕೈಬಿಟ್ಟರೆ ಕಾಂಗ್ರೆಸ್ಗೆ ತೊಂದರೆ ಎಂದು ಹೈಕಮಾಂಡ್ ಮುಂದೆ ವಾದ ಮಂಡಿಸಲು ಸಿದ್ದರಾಮಯ್ಯ ಅತ್ಯಾಪ್ತ ಸಚಿವರು ಸಿದ್ದವಾಗಿದ್ದಾರೆ. ಅದರಲ್ಲೂ ಅಹಿಂದ ಸಚಿವರು ವಿಶೇಷವಾಗಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಲಿದ್ದಾರೆ ಎನ್ನಲಾಗಿದೆ.