ಮುಂಬಯಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) 2023ರಲ್ಲಿ ಐಪಿಎಲ್ ಒಂದರಿಂದಲೇ ಗಳಿಸಿದ ಆದಾಯ ಬರೋಬ್ಬರಿ 5,120 ಕೋಟಿ ರೂ! ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿರುವ ಬಿಸಿಸಿಐ 2022-23ರ ವಾರ್ಷಿಕ ಹಣಕಾಸು ವರದಿಯನ್ನು ಪ್ರಕಟಿಸಿದ್ದು, ಇದರಲ್ಲಿ ಈ ಮಾಹಿತಿಯಿದೆ. 2023ರಲ್ಲಿ ಐಪಿಎಲ್‌ನಿಂದ 11,769 ಕೋಟಿ ರೂ. ಆದಾಯ ಬಿಸಿಸಿಐಗೆ ಹರಿದು ಬಂದಿದೆ. ಇದರಲ್ಲಿ ಖರ್ಷು ಕಳೆದು 5,120.13 ಕೋಟಿ ರೂ. ಉಳಿತಾಯವಾಗಿದೆ. ಐಪಿಎಲ್‌ಗೆ 6,648 ಕೋ. ರೂ. ಬಿಸಿಸಿಐ ಖರ್ಚು ಮಾಡಿದೆ.
ಐಪಿಎಲ್ 2022ರ ಆದಾಯ 2,367 ಕೋಟಿ ರೂ.ಗೆ ಹೋಲಿಸಿದರೆ ಇದು ಶೇ. 116 ರಷ್ಟು ಹೆಚ್ಚಳವಾಗಿದೆ. ಅಂತೆಯೇ ಖರ್ಚಿನಲ್ಲೂ ಶೇ.66 ಹೆಚ್ಚಳವಾಗಿದೆ.
ಐಪಿಎಲ್ ಹಾಗೂ ಟೀಮ್ ಇಂಡಿಯಾದ ಅನೇಕ ಪ್ರಾಯೋಜಕರಿಂದ ಪಡೆದ ಹಣ ಬಿಸಿಸಿಐ ಆದಾಯ ಏರಿಕೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ಇದರಲ್ಲಿ ಗರಿಷ್ಠ ಆದಾಯವನ್ನು ಮಂಡಳಿಯು ಪ್ರಸಾರ ಹಕ್ಕುಗಳಿಂದ ಗಳಿಸುತ್ತದೆ. 2022ರಲ್ಲಿ ಐಪಿಎಲ್ ಪ್ರಸಾರ ಹಕ್ಕುಗಳನ್ನು ಬಿಸಿಸಿಐ 48,390 ಕೋಟಿ ರೂ.ಗೆ ಮಾರಾಟ ಮಾಡಿತ್ತು.
ಬ್ಯಾಂಕ್‌ನಲ್ಲಿ ಬಿಸಿಸಿಐ 16493.2 ಕೋಟಿ ರೂ. ಎಫ್ಡಿ ಇಟ್ಟಿದೆ ಎಂದು ವರದಿಯಲ್ಲಿ ತಿಳಿಸಿದೆ. 2023 ಮತ್ತು 2024ರ ಅವಧಿಯಲ್ಲಿ ಬಿಸಿಸಿಐ 2,038 ಕೋಟಿ ರೂ ಜಿಎಸ್‌ಟಿ ಪಾವತಿಸಿದೆ.
ಐಪಿಎಲ್ ಸೀಸನ್-18 ಕ್ಕಾಗಿ ಸಿದ್ಧತೆಯಲ್ಲಿರುವ ಬಿಸಿಸಿಐ ಈ ಬಾರಿ ಕೂಡ ಪ್ರಾಯೋಕತ್ವದಿಂದ ಬೃಹತ್ ಮೊತ್ತವನ್ನು ನಿರೀಕ್ಷಿಸುತ್ತಿದೆ. ಅದರಲ್ಲೂ ಈ ಬಾರಿ ಪಂದ್ಯಗಳ ಸಂಖ್ಯೆಯು ಹೆಚ್ಚಳವಾಗುವ ಸಾಧ್ಯತೆಯಿದೆ. ಅಂದರೆ ಮಾಧ್ಯಮ ಪ್ರಸಾರ ಒಪ್ಪಂದಗಳ ಪ್ರಕಾರ ಐಪಿಎಲ್ 2025 ರಲ್ಲಿ ಒಟ್ಟು 84 ಪಂದ್ಯಗಳನ್ನು ಆಯೋಜಿಸುವುದಾಗಿ ಬಿಸಿಸಿಐ ತಿಳಿಸಿದೆ.