ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಜಂಟಿ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜನ್ಮ ದಿನಾಚರಣೆ | ನಾರಾಯಣ ಗುರುಗಳು ಮೋಡದ ಮಧ್ಯೆ ಮೂಡಿ ಬಂದ ಬೆಳ್ಳಿರೇಖೆ : ಪ್ರೊ. ಎ.ಕೃಷ್ಣಪ್ಪ ಪೂಜಾರಿ

ಪುತ್ತೂರು: ಶೋಷಣೆಯ ಸುಳಿಗೆ ಸಿಲುಕಿದ್ದ ಬಿಲ್ಲವ ಸಮಾಜ ಇಂದು ಈ ಹಂತಕ್ಕೆ ತಲುಪಲು ನಾರಾಯಣ ಗುರುಗಳ ಸಂದೇಶ, ಮಾರ್ಗದರ್ಶನ ಕಾರಣ. ಅನ್ನ, ನೀರು, ಭೂಮಿ, ತಂದೆ- ತಾಯಿಗಳ ಋಣ ನಮ್ಮ ಮೇಲೆ ಇರುವಂತೆ ಎಲ್ಲ ತುಳಿತಕ್ಕೆ ಒಳಗಾದ ಸಮಾಜಗಳಿಗೆ ನಾರಾಯಣ ಗುರುಗಳ ಋಣವಿದೆ ಎಂದು ನಿವೃತ್ತ ಪ್ರಾಂಶುಪಾಲರಾದ ಬೆಳ್ತಂಗಡಿಯ ಪ್ರೊ..ಎ.ಕೃಷ್ಣಪ್ಪ ಪೂಜಾರಿ ಹೇಳಿದರು.

ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಜಂಟಿ ಆಶ್ರಯದಲ್ಲಿ ಪುತ್ತೂರು ನಾರಾಯಣ ಗುರು ಸಭಾಭವನದಲ್ಲಿ  ಮಂಗಳವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಸಂದೇಶ ನೀಡಿದರು.

ಸ್ವಾಭಿಮಾನವಿಲ್ಲದ ವ್ಯಕ್ತಿಯಾಗಲಿ, ಸಮಾಜವಾಗಲಿ ಅರ್ಧ ಸತ್ತಂತೆ. ಯಾವುದೇ ಸಿರಿ ಸಂಪತ್ತು ಇಲ್ಲದಿದ್ದರೂ ಸ್ವಾಭಿಮಾನದ ಬದುಕಿಗೆ ಕುಂದುಂಟು ಮಾಡಿಕೊಳ್ಳದಂತೆ ಬದುಕಬೇಕು ಎಂದು ಅವರು ಹೇಳಿದ ಅವರು, ನಾರಾಯಣ ಗುರುಗಳು ಮೋಡದ ಮಧ್ಯೆ ಮೂಡಿ ಬಂದ ಬೆಳ್ಳಿರೇಖೆ. ಅವರೊಬ್ಬ ಜಗದ್ಗುರು. ಅಂತರಂಗದ ಜ್ಯೋತಿ ಬೆಳಗಿದ ಆಚಾರ್ಯರು ಎಂದರು.



































 
 

ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ವೈದ್ಯರಾದ ಡಾ. ಸದಾನಂದ ಪೂಜಾರಿ ಮಾತನಾಡಿ, ಶಿಕ್ಷಣದಿಂದ ಮಾತ್ರ ನಾವು ಸ್ವಾಭಿಮಾನಿ ಮತ್ತು ಸಂಘಟಿತ ಬದುಕು ಕಟ್ಟಲು ಸಾಧ್ಯ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಭಾಸ್ಕರ ಕೋಟ್ಯಾನ್ ಇರ್ವತ್ತೂರು ಮಾತನಾಡಿದರು.

ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಅಧ್ಯಕ್ಷತೆ ವಹಿಸಿ ಮಾತನಾಡಿ,  ಗುರುಗಳ ಸಂದೇಶದ ಪ್ರಕಾರ ಎಲ್ಲ ಜಾತಿ, ಧರ್ಮಗಳನ್ನೂ ಗೌರವದಿಂದ ಕಾಣುವ ಕೆಲಸ ಪುತ್ತೂರು ಬಿಲ್ಲವ ಸಂಘ ಮಾಡುತ್ತಿದೆ. ಎಲ್ಲ ಸಮಾಜದ ಮುಖಂಡರನ್ನು, ಸಾಧಕರನ್ನು ಗೌರವಿಸಲಾಗುತ್ತಿದೆ ಎಂದರು.

ಸಾಧಕರಿಗೆ ಸನ್ಮಾನ:

ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಸಹಕಾರಿ ರತ್ನ  ಕೆ. ಸೀತಾರಾಮ ರೈ ಸವಣೂರು, ಹಿರಿಯ ಪ್ರಸೂತಿ ತಜ್ಞ ಡಾ. ಸುಬ್ರಾಯ ಭಟ್, ಹಿರಿಯ ಪ್ರಗತಿಪರ ಕೃಷಿಕ ಕೇಪುಳು ಬಾಳಪ್ಪ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧನೆ ಮಾಡಿದ 50 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಿಲ್ಲವ ಸಮಾಜದ ಗಣ್ಯರನ್ನು ಗೌರವಿಸಲಾಯಿತು. ಬಿಲ್ಲವ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಧಿ ವಿತರಿಸಲಾಯಿತು.

ವಿನೀಶ ಸುಳ್ಯಪದವು ಪ್ರಾರ್ಥನೆ ಹಾಡಿದರು. ಸಂಘದ ಉಪಾಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಚಿದಾನಂದ ಸುವರ್ಣ ವಂದಿಸಿದರು. ದಯಾನಂದ ಕರ್ಕೆರ, ದೀಕ್ಷಾ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.

ಧಾರ್ಮಿಕ ಕಾರ್ಯಕ್ರಮಗಳು:

ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಗಣಹೋಮ, ಪಂಚಾಮೃತ ಅಭಿಷೇಕ ನಡೆಯಿತು. ಭಕ್ತರ ದೇಣಿಗೆಯಿಂದ ನಿರ್ಮಿಸಲಾದ ಬೆಳ್ಳಿ ಕಿರೀಟವನ್ನು ಈ ಸಂದರ್ಭದಲ್ಲಿ ಗುರುಗಳ ಪ್ರತಿಮೆಗೆ ತೊಡಿಸಲಾಯಿತು. ಪುತ್ತೂರು ಮತ್ತು ಕಡಬ ತಾಲೂಕುಗಳ ಬಿಲ್ಲವ ಕುಟುಂಬಗಳ ವತಿಯಿಂದ ಸುಮಾರ 3 ಸಾವಿರ ಗುರುಪೂಜೆ ಮಾಡಿಸಲಾಯುತು. ಮಂದಿರದ ಕಾರ್ಯನಿರ್ವಹಣಾ ಅಧಿಕಾರಿ ಉದಯ ಕುಮಾರ್ ಕೋಲಾಡಿ ನೇತೃತ್ವ  ವಹಿಸಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top