ಮಂಗಳೂರು : ಮಂಗಳೂರಿನ ಎರಡು ಪ್ರತಿಷ್ಟಿತ ಕಾಲೇಜಿನ ವಿದ್ಯಾರ್ಥಿಗಳು ಆಟವಾಡುತ್ತಿದ್ದಾಗ ಕಿರಿಕ್ ಮಾಡಿಕೊಂಡ, ಬಳಿಕ ಒಂದು ತಂಡದ ವಿದ್ಯಾರ್ಥಿಗಳು ಇನ್ನೊಂದು ತಂಡದ ವಿದ್ಯಾರ್ಥಿಗಳನ್ನು ಕಿಡ್ನ್ಯಾಪ್ ಮಾಡಿ ಯದ್ವಾತದ್ವಾ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಮಂಗಳೂರಿನ ಯೆನಪೊಯ ಮತ್ತು ಅಲೋಶಿಯಸ್ ಕಾಲೇಜು ವಿದ್ಯಾರ್ಥಿಗಳ ನಡುವೆ ಪುಟ್ಬಾಲ್ ಆಟದ ವಿಚಾರವಾಗಿ ಗಲಾಟೆ ಆರಂಭಗೊಂಡು ಬಳಿಕ ತಾರಕಕ್ಕೇರಿದೆ ಎಂದು ತಿಳಿದು ಬಂದಿದೆ. ಯೆನಪೊಯದ 17ರ ಬಾಲಕ ದೂರು ನೀಡಿದಾತ. ಈತನ ಜತೆ ಇನ್ನಿಬ್ಬರು 17ರ ಹರೆಯದ ಬಾಲಕರು ಹಲ್ಲೆಗೊಳಗಾಗಿದ್ದಾರೆ.
ದಿಯಾನ್, ತಸ್ಮಿನ್,ಸಲ್ಮಾನ್ ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಹಲ್ಲೆ ಮಾಡಿದವರು ಎಂದು ಆರೋಪಿಸಲಾಗಿದೆ. ಈ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ವಿದ್ಯಾರ್ಥಿಗಳನ್ನು ಮಂಗಳೂರು ನಗರದ ಮೂರು ಕಡೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದ್ದು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಂಗಳೂರಿನ ಮಹಾಕಾಳಿ ಪಡ್ಡು ಹಾಗೂ ಜೆಪ್ಪು ಮಹಕಾಲೀ ಪಡ್ಡು ಮಸೀದಿ ಬಳಿ ಹಲ್ಲೆ ನಡೆದಿರುವುದಾಗಿ ಹೇಳಲಾಗುತ್ತಿದೆ.
ಸಂತ್ರಸ್ತ ವಿದ್ಯಾರ್ಥಿಗಳ ಮೇಲೆ ಯದ್ವಾತದ್ವಾ ಹೊಡೆದು ಸಿಗರೇಟ್ ನಿಂದ ಸುಟ್ಟು ಹಲ್ಲೆ ನಡೆಸಿರುವುದು, ಕ್ಷಮೆ ಕೇಳುವಂತೆ ಒತ್ತಾಯಿಸಿ ಹಲ್ಲೆ ನಡೆಸಿರುವುದು ವೈರಲ್ ವಿಡಿಯೋದಲ್ಲಿ ಗೋಚರಿಸುತ್ತಿದೆ. ಮುಂದುವರಿದು, ಆರೋಪಿಗಳು ಸಂತ್ರಸ್ತರನ್ನು ಅರೆಬೆತ್ತಲು ಗೊಳಿಸಿ ಬಸ್ಕಿ ಹೊಡೆಸಿದ್ದಾರೆ.
ವಿಡಿಯೋ ವೈರಲ್ ಹಿನ್ನಲೆಯಲ್ಲಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಉಳಿದವರಿಗಾಗಿ ಶೋಧ ಮುಂದುವರಿದಿದೆ.
ಗಾಯಾಳು ವಿದ್ಯಾರ್ಥಿಗಳನ್ನು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಆರೋಪಿಗಳ ವಿರುದ್ದ ಆ 19 ರಂದು ಮಂಗಳೂರು ದಕ್ಷಿನ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ U/s109, 115(2), 118(1), 127(2), 137(2), 189(2), 190, 191(1), 191(3), 351(2), 352 of BNS, 2023 ರಂತೆ ಪ್ರಕರಣ ದಾಖಲಾಗಿದೆ.