ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 18ನೇ ವರ್ಷದ “ಅಷ್ಟಾದಶ ಸಂಭ್ರಮ” ವಿಜೃಂಭಣೆಯಿಂದ ಆಚರಿಸಲಾಯಿತು.
ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಬದುಕಿನಲ್ಲಿ ಗುರಿ ಹಾಗೂ ಗುರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ನಾವು ನಮ್ಮ ಗುರಿಯನ್ನು ಮರೆಯಬಾರದು ಎಂದು ಹೇಳಿದರು.

ಸಂಸ್ಥೆಯ ಪ್ರಾಂಶುಪಾಲೆ ಹೇಮಲತಾ ಗೋಕುಲ್‌ನಾಥ್ ಪ್ರಸ್ತಾವಿಕವಾಗಿ ಮಾತನಾಡಿ, ಪ್ರಗತಿಯ ಮುಂದಿನ ಗುರಿಗಳ ಬಗ್ಗೆ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಚಾಲಕ ಗೋಕುಲ್‌ನಾಥ್ ಪಿ.ವಿ., ಪ್ರಗತಿ ಸ್ಟಡಿ ಸೆಂಟರ್ ನಡೆದು ಬಂದ ಹಾದಿಯನ್ನು ತಿಳಿಸಿ, ಎಪಿಎಂಸಿ ರಸ್ತೆಯಲ್ಲಿರುವ ಮಣಾಯಿ ಆರ್ಕೇಡ್ ನ 2ನೇ ಅಂತಸ್ತಿನಲ್ಲಿ ಒಕ್ಟೋಬರ್ 3 ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಎವಿಯೇಶನ್ ಹಾಗೂ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಹಾಸ್ಪಿಟಲ್ ಸೈನ್ಸ್ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಮಾತನಾಡಿದರು, ಅನೇಕ ಕನಸುಗಳನ್ನು ಹೊತ್ತಿರುವಂತಹ ಪ್ರಗತಿ ಸ್ಟಡಿ ಸೆಂಟರ್ ಇಂದು ಪ್ರಗತಿಯ ಪಥದಲ್ಲಿ ಸಾಗುತ್ತಿದೆ. ವಿದ್ಯಾರ್ಥಿಗಳೆಲ್ಲ ತಮ್ಮ ಹೆತ್ತವರ ಕನಸನ್ನು ಹುಸಿಗೊಳಿಸದೆ ಉತ್ತಮ ವಿದ್ಯಾರ್ಥಿಗಳಾಗಿ ಎಂದು ಶುಭ ಹಾರೈಸಿದರು.
ನಿವೃತ್ತ ಶಿಕ್ಷಕ, ಮಧು ಪ್ರಪಂಚ ಅಂಕಣಕಾರ ನಾರಾಯಣ ರೈ ಕುಕ್ಕುವಳ್ಳಿ ಮಾತನಾಡಿ, ಮನಸ್ಸಿನ ಒಳಗೂ ಕತ್ತಲು, ಹೊರಗೂ ಕತ್ತಲು, ಜ್ಞಾನ ವಿಜ್ಞಾನ ಬೆಳೆಸಿದಾಗ ಒಳಗೂ ಬೆಳಕು ಹೊರಗೂ ಬೆಳಕು. ಮಕ್ಕಳೆಂದರೆ ರತ್ನಗಳು ದೇಶವನ್ನು ಬೆಳೆಸಬೇಕಾದವರು ಎಂದು ಹೇಳಿದರು.
ಕೊಂಬೆಟ್ಟು ಕಾಲೇಜು ಚಿತ್ರಕಲಾ ಶಿಕ್ಷಕ ಪರುಶುರಾಮ ಲದ್ವಾ, ಹಾಗೂ Siemens Technology As Senior Operation ಸಂಸ್ಥೆಯ ವಿದ್ಯಾರ್ಥಿನಿ ಅಕ್ಷಿತಾ ಎಂ. ಕೆ. ಕೊಡಗು ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಪರುಶುರಾಮ ಲದ್ವಾ ಅವರ ಪತ್ನಿ ಸುಮನ್ ಲದ್ವಾ ಮಾತನಾಡಿ, ಜೀವನದಲ್ಲಿ ಏನೇ ಬಂದರು ಹೆದರಬಾರದು, ಎದುರಿಸಿ ನಿಲ್ಲಬೇಕು. ಎಲ್ಲಾ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.
ಸಂಸ್ಥೆಯ ಮುಖ್ಯ ಶಿಕ್ಷಕಿ ಪ್ರಮೀಳಾ ಎನ್.ಡಿ. ಮಾತನಾಡಿ, ಹೊಸ ಹೊಸ ಕನಸುಗಳನ್ನು ಹೊತ್ತು ಬರುವ ಮಕ್ಕಳ ಕನಸು ನನಸಾಗಲಿ ಎಂದರು.
ಬಳಿಕ ವಿಠಲ ನಾಯಕ್ ಕಲ್ಲಡ್ಕ ಅವರಿಂದ ಗೀತ ಸಾಹಿತ್ಯ ವೈಭವ ವಿನೂತನ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನದ ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಲಶ್ವಿತ್ ಪ್ರಾರ್ಥಿಸಿದರು. ಉಪನ್ಯಾಸಕಿ ಲವ್ಯಶ್ರೀ ಸ್ವಾಗತಿಸಿದರು. ಉಪನ್ಯಾಸಕಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಕೀರ್ತಿಕ ವಂದಿಸಿದರು.