ಮೈಸೂರು: ಮುಡಾ ಸೈಟ್ ಹಂಚಿಕೆ ಹಗರಣಕ್ಕೆ ಸಂಬಂಧಿಸಿ ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಶನಿವಾರ ಬೆಳಗ್ಗೆ ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಅನುಮತಿ ನೀಡಿದ್ದಾರೆ.
ದೂರುದಾರ, ಸಾಮಾಜಿಕ ಹೋರಾಟಗಾರ ಟಿಜೆ ಅಬ್ರಹಾಂ, ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ಒಳ್ಳೆಯ ಸಂಗತಿಯಾಗಿದೆ. ನನಗೂ ರಾಜಭವನದಿಂದ ಕರೆ ಬಂದಿದೆ. ಈಗಾಗಲೇ ಮಡಿಕೇರಿಯಿಂದ ನಾನು ಹೊರಟಿದ್ದೇನೆ. ಮಧ್ಯಾಹ್ನದ ವೇಳೆಗೆ ನಾನು ಅವರನ್ನು ಭೇಟಿಯಾಗಲಿದ್ದೇನೆ. ಮುಂದಿನ ಕಾನೂನು ಹೋರಾಟ ಕೂಡ ತುಂಬಾ ದೀರ್ಘವಾಗಿ ಇರಲಿದೆ ಎಂದು ಅವರು ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರ ರಾಜಕೀಯ ಜೀವನದ ಅತಿದೊಡ್ಡ ಸಂಕಷ್ಟ ಇದು ಎಂದು ಹೇಳಲಾಗಿದೆ.ಮೂರು ದೂರುಗಳನ್ನು ಒಟ್ಟಿಗೆ ಸೇರಿಸಿ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ.
ಇಂದು ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಸುಳಿವು ಸಿಎಂ ಸಿದ್ದರಾಮಯ್ಯ ಅವರಿಗೆ ಶುಕ್ರವಾರವೇ ಲಭಿಸಿತ್ತು. ಅದರಂತೆ ಕಳೆದ ರಾತ್ರಿ ಕಾನೂನು ಸಲಹೆಗಾರ ಪೊನ್ನಣ್ಣ ಅವರೊಂದಿಗೆ ಸಿಎಂ ಸಮಾಲೋಚನೆ ನಡೆಸಿದ್ದಾರೆ.
ಇನ್ನು ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುತ್ತಿದ್ದಂತೆಯೇ ಸಿಎಂ ನಿವಾಸಕ್ಕೆ ಸಚಿವರಾದ ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಬೈರತಿಸುರೇಶ್ ಮೊದಲಿಗರಾಗಿ ಆಗಮಿಸಿದ್ದಾರೆ.