ಮಾಣಿಲ: ಭರತ ಭೂಮಿಯಲ್ಲಿ ಜನ್ಮತಳೆದ ನಮ್ಮ ಬಾಳು ಧನ್ಯ ಎಂದು ವಿಶ್ರಾಂತ ಪ್ರಾಧ್ಯಾಪಕ ಗೋವಿಂದ ಭಟ್ ಕನ್ನಡಗುಳಿ ಹೇಳಿದ್ದಾರೆ.
ಅವರು ಮಾಣಿಲ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರ ಸಮರ್ಪಣಾ ಭಾವ ಅಗತ್ಯ ಎಂದ ಅವರು ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡು ಪ್ರಜ್ಞಾವಂತ ನಾಗರಿಕರಾಗಲು ಕರೆ ನೀಡಿದರು.
ಎಸ್ ಡಿ ಎಂ ಸಿ ಅಧ್ಯಕ್ಷ ಶಿವಪ್ರಸಾದ್ ಸೊರಂಪಳ್ಳ ಧ್ವಜಾರೋಹಣ ಮಾಡಿ, ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ 2023 – 24ನೇ ಸಾಲಿನ ಎಸ್ ಎಲ್ ಎಲ್ ಸಿ ಸಾಧಕ ವಿದ್ಯಾರ್ಥಿಗಳನ್ನು, ಎನ್ ಎಂಎಂಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ಹಾಗೂ ಇನ್ಸ್ಪೈರ್ ಅವಾರ್ಡ್ ಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಮಾಣಿಲ ಗ್ರಾಮ ಪಂಚಾಯತ್ ನ ಅಧ್ಯಕ್ಷ ಶ್ರೀಧರ ಬಾಳೆಕಲ್ಲು, ನಿಕಟಪೂರ್ವ ಉಪಾಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ಹಿರಿಯರಾದ ಮುರುವ ನಡುಮನೆ ಮಹಾಬಲ ಭಟ್, ಎಸ್ ಡಿ ಎಂ ಸಿ ಸದಸ್ಯ ವಿಷ್ಣು ಕನ್ನಡಗುಳಿ ಮೊದಲಾದವರು ಮಾತನಾಡಿದರು. ಮಾಣಿಲ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷೆ ವನಿತಾ, ನಿವೃತ್ತ ಶಿಕ್ಷಕ ಅನಂತ ಭಟ್, ನೌಕರರ ಸಂಘದ ಬಂಟ್ವಾಳ ಘಟಕದ ಅಧ್ಯಕ್ಷ ಉಮಾನಾಥ ರೈ ಮೇರಾವು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಸದಸ್ಯರು, ಶಾಲಾ ಪೋಷಕ ವರ್ಗದವರು, ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಸಹಭಾಗಿಗಳಾದರು. ಶಾಲಾ ಮುಖ್ಯ ಶಿಕ್ಷಕಿ ಲತಾ ಯು. ಸ್ವಾಗತಿಸಿದರು. ಸುಧೀಶ್ ಕೆ ಕಾರ್ಯಕ್ರಮ ನಿರೂಪಿಸಿದರು. ಸಂದೇಶ್ ವಂದಿಸಿದರು.