ಪುತ್ತೂರು : ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ವಿರೋಧಿಸಿ ಹಾಗೂ ಸಮಾಜದಲ್ಲಿ ರಾಷ್ಟ್ರೀಯ ಜಾಗೃತಿ ಮೂಡಿಸಲು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ಮಾನವ ಸರಪಳಿ ಜಾಥಾ ಗುರುವಾರ ತೆಂಕಿಲದ ಶಾಲಾ ಆವರಣದಲ್ಲಿ ನಡೆಯಿತು.
ಜಾಥಾಕ್ಕೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಕಾಲೇಜಿನ ಕ್ಯಾಂಪಸ್ಸಿನ ಮುಖ್ಯ ದ್ವಾರದ ಬಳಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ ಕೃಷ್ಣ ಭಟ್ ಉಪಸ್ಥಿತರಿದ್ದರು.
ನೆಹರೂ ನಗರದಲ್ಲಿರುವ ವಿವೇಕಾನಂದ ಕಾಲೇಜಿನ ಆವರಣದಿಂದ ವಿದ್ಯಾರ್ಥಿಗಳು ಮಾನವ ಸರಪಳಿಯ ಮೂಲಕ ಹೊರಟು ತೆಂಕಿಲದಲ್ಲಿರುವ ವಿವೇಕಾನಂದ ಶಾಲಾ ಆವರಣದಲ್ಲಿ ಒಟ್ಟಾಗಿ ಸಮಾಜದಲ್ಲಿ ಜನ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮ ಮಾಡಿದರು. ಜಾಥಾದುದ್ದಕ್ಕೂ ವಿದ್ಯಾರ್ಥಿಗಳು ಬಾಂಗ್ಲಾ ವಿರುದ್ಧ ಘೋಷಣೆಯನ್ನು ಕೂಗುತ್ತಾ ರಾಷ್ಟ್ರೀಯ ಜಾಗೃತಿಯನ್ನು ಮೂಡಿಸುವ ಭಿತ್ತಿಪತ್ರಗಳನ್ನು ಹಿಡಿದು ಸಾಗಿದರು.
ಹಾಗೂ ಈ ಮಾನವ ಸರಪಳಿ ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುವ ವಿವಿಧ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು, ಪ್ರಿನ್ಸಿಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಸೇರಿದಂತೆ ಸುಮಾರು ಹತ್ತು ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದರು.