ಪುತ್ತೂರು: ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ ಎಂದು ಪರಿಗಣಿಸಲ್ಪಟ್ಟ ಪದ್ಮಶ್ರೀ ಡಾ. ಎಸ್ ಆರ್ ರಂಗನಾಥನ್ ಅವರ 132 ನೇ ಜನ್ಮ ದಿನದ ಅಂಗವಾಗಿ ಆಚರಿಸಲ್ಪಡುತ್ತಿರುವ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ’ ಯನ್ನು ಸಂತ ಫಿಲೋಮಿನಾ ಕಾಲೇಜು ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಆಯೋಜನೆಯಲ್ಲಿ ಕಾಲೇಜಿನ ಸ್ನಾತಕೋತ್ತರ ಸಭಾಭವನದಲ್ಲಿ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಜಯಕುಮಾರ್ ಮೊಳೆಯಾರ್ ಮಾತನಾಡಿ, ಪ್ರತಿಯೊಂದು ಜೀವಿಗೂ ಬದುಕಲು ನೀರು, ಗಾಳಿ, ಬೆಳಕು ಮತ್ತು ಆಹಾರ ಹೇಗೆ ಮುಖ್ಯವೋ ಹಾಗೆ ಮನುಷ್ಯನಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಲು ಉತ್ತಮ ವ್ಯಕ್ತಿತ್ವವನ್ನು ರೂಪಿಸಲು ಪುಸ್ತಕಗಳು ಹಾಗೂ ಓದು ಅವಶ್ಯಕ. ಗ್ರಂಥಾಲಯವು ಶಿಕ್ಷಣ ವ್ಯವಸ್ಥೆಯ ಮುಖ್ಯ ಅಂಗವಾಗಿದೆ. ಅಲ್ಲಿ ಮಹನೀಯರು ಬರೆದ ಪುಸ್ತಕಗಳ ಭಂಡಾರವಿದೆ. ಡಾ. ಎಸ್. ಆರ್. ರಂಗನಾಥ್ ರವರು ಭಾರತದಲ್ಲಿ ಗ್ರಂಥಾಲಯ ವಿಜ್ಞಾನದ ಬೆಳವಣಿಗೆಯಲ್ಲಿ ಯಾರೂ ಮರೆಯಲಾರದ ಕೊಡುಗೆಯನ್ನು ನೀಡಿರುತ್ತಾರೆ. ಅವರನ್ನು ಸ್ಮರಿಸುವುದು ಗ್ರಂಥಪಾಲಕರ ದಿನದ ಆಚರಣೆಯ ಪ್ರಮುಖ ಉದ್ದೇಶವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ವಂ.ಡಾ. ಆಂಟನಿ ಪ್ರಕಾಶ್ ಮೊಂತೆರೋ ಮಾತನಾಡಿ, ಸ್ಮಾರ್ಟ್ ಪೋನ್ ಹಾಗೂ ಅಂತರ್ಜಾಲವು ಪುಸ್ತಕಕ್ಕೆ ಯಾವುದೇ ಪರ್ಯಾಯವಲ್ಲ. ಒಬ್ಬ ವ್ಯಕ್ತಿಯು ಪುಸ್ತಕವನ್ನು ಓದುವಾಗ ಯಾವುದೇ ರೀತಿಯ ಮಾನಸಿಕ ವ್ಯಾಕುಲತೆಯನ್ನು ಅನುಭವಿಸುವ ಪ್ರಮೇಯವೇ ಉದ್ಭವಿಸುವುದಿಲ್ಲ. ವ್ಯಕ್ತಿತ್ವ ವಿಕಸನ ಪುಸ್ತಕಗಳನ್ನು ಓದುವುದರಿಂದ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ನಿರ್ದೇಶಕಿ ಡಾ. ಮಾಲಿನಿ ಕೆ. ಉಪಸ್ಥಿತರಿದ್ದರು. ಕಾಲೇಜಿನ ಆಯ್ಕೆ ಶ್ರೇಣಿ ಗ್ರಂಥಪಾಲಕ ಅಬ್ದುಲ್ ರಹ್ಮಾನ್ ಸ್ವಾಗತಿಸಿದರು. ಸ್ನಾತಕೋತ್ತರ ವಿಭಾಗದ ಗ್ರಂಥಪಾಲಕ ಮನೋಹರ್ ಎಸ್.ಜಿ. ವಂದಿಸಿದರು. ಕಾಲೇಜು ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮಣಿ ಕಾರ್ಯಕ್ರಮ ನಿರ್ವಹಿಸಿದರು. ಗಣಿತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಆಶ್ರೀತಾ ಕೆ.ಎಂ. ಪ್ರಾರ್ಥಿಸಿದರು. ಸಿಬ್ಬಂದಿಗಳಾದ ಝೀತಾ ನೊರೊನ್ನಾ ಹಾಗೂ ಕ್ಯಾಥರಿನ್ ಕ್ರಾಸ್ತಾ ಸಹಕರಿಸಿದರು.