ಪುತ್ತೂರು: ಬೀಡಿ ಕಾರ್ಮಿಕ ಸಂಘದ ಅಧ್ಯಕ್ಷರಾಗಿ ನ್ಯಾಯವಾದಿ ಪಿಕೆ ಸತೀಶನ್ , ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಂ.ಭಟ್, ಖಜಾಂಜಿಯಾಗಿ ಈಶ್ವರಿ ಶಂಕರ್ ಮುಂಡೂರು ಆಯ್ಕೆ
ಪುತ್ತೂರು ಮಾಜಿ ಸೈನಿಕ ಭವನದಲ್ಲಿ ನಡೆದ ಪುತ್ತೂರು ತಾಲೂಕು ಬೀಡಿ ಕಾರ್ಮಿಕ ಸಂಘದ 10ನೇ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.
ಉಪಾದ್ಯಕ್ಷರಾಗಿ ಗುಡ್ಡಪ್ಪ ಗೌಡ, ಮತ್ತು ಚಿತ್ರಕಲಾ ದೋಳ್ಪಾಡಿ, ಸಹಕಾರ್ಯದರ್ಶಿಯಾಗಿ ಪವಿತ್ರ ಗೆಜ್ಜೆಗಿರಿ ಮತ್ತು ಜಾನಕಿ ಕೊಪ್ಪ ಹಾಗೂ ಸದಸ್ಯರಾಗಿ ಕಸ್ತೂರಿ ರೈ ಕೋಳ್ತಿಗೆ, ಜಯಂತಿ ಪಾಲ್ತಡಿ, ವಾರಿಜ ದೋಳ್ಪಾಡಿ, ಸುಂದರಿ ಇರ್ದೆ, ಉಷಾ ಮುಂಡೂರು, ಯಶೋದ ಮೂರಾಜೆ, ಬೇಬಿ, ಸವಿತ ಮೊದಲಾದವರು ಆಯ್ಕೆ ಆದರು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಪಿ.ಕೆ.ಸತೀಶನ್, ಒಂದು ಸಾವಿರ ಬೀಡಿಗೆ 315.04 ರೂ. ನೀಡಬೇಕಾದಲ್ಲಿ ಬೀಡಿ ಮಾಲಕರು ಕೇವಲ 263.80 ನೀಡಿ ಪ್ರತಿ ಒಂದು ಸಾವಿರ ಬೀಡಿಯಲ್ಲಿ ತಲಾ 21.24 ರೂ. ಲೂಟಿಹೊಡೆಯುತ್ತಿದ್ದಾರೆ. ಇಂತಹ ಕಾನೂನು ಬಾಹಿರ ಕೆಲಸಗಳನ್ನು ತಡೆಯಲಾಗದ ಕಾರ್ಮಿಕ ಇಲಾಖೆ ಇರುವುದಾದರೂ ಯಾಕೆ ? ಎಂದು ಪ್ರಶ್ನಿಸಿದ ಅವರು, ಈ ವರ್ಷ ಪ್ರತಿ ಒಂದು ಸಾವಿರ ಬೀಡಿಗೆ ತಲಾ 41.46 ರೂ. ರಂತೆ ಅಂದರೆ ೧ ಲಕ್ಷ ಬೀಡಿ ತಯಾರಿಸಿದವರಿಗೆ 4,146 ರೂ. ರಂತೆ ಬೋನಸ್ ಬಿಡುಗಡೆಯಾಗಿದ್ದು ಅದನ್ನು ಸಮರ್ಪಕವಾಗಿ ಕಾರ್ಮಿಕರಿಗೆ ತಲುಪಿಸಲು ಕಾರ್ಮಿಕ ಇಲಾಖೆ ಮುಂದಾಗಬೇಕಿದೆ ಎಂದರು.
ಈ ಸಂದರ್ಭ ಮಾತಾಡಿದ ನ್ಯಾಯವಾದಿ ಬಿ.ಎಂ.ಭಟ್, ಬೀಡಿ ಕಾರ್ಮಿಕರು ತಮ್ಮ ತಮ್ಮ ಪ್ರದೇಶದಲ್ಲಿ ಸಭೆ ಸೇರಿ ಮಾಹಿತಿ ಕಾರ್ಯಕ್ರಮ ಏರ್ಪಡಿಸಿದಾಗಲೇ ಕಾನೂನು ಬದ್ದ ಸವಲತ್ತುಗಳು ವಂಚನೆ ಆಗುವುದನ್ನು ತಡೆಯಲು ಸಾದ್ಯ ಎಂದರು.
ಸಭೆಯ ಅದ್ಯಕ್ಷತೆಯನ್ನು ಗುಡ್ಡಪ್ಪ ಗೌಡ ವಹಿಸಿದ್ದರು. ಈಶ್ವರಿ ಸ್ವಾಗತಿಸಿ, ವಂದಿಸಿದರು.