ವಯನಾಡ್: ವಯನಾಡಿನ ಭೂಕುಸಿತ ಪೀಡಿತ ಪ್ರದೇಶಗಳಾದ ಮುಂಡಕ್ಕೆ ಮತ್ತು ಚೂರಲ್ ಮಲೆಯ ತನ್ನ ಶಾಖೆಗಳಲ್ಲಿನ ಸಾಲ ಮನ್ನಾ ಮಾಡಲು ಸರ್ಕಾರಿ ಸ್ವಾಮ್ಯದ ಕೇರಳ ಬ್ಯಾಂಕ್ ನಿರ್ಧರಿಸಿದೆ.
ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ದುರಂತದಲ್ಲಿ ಮನೆ, ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಕುಟುಂಬಗಳಿಗೆ ಕೇರಳ ಸರ್ಕಾರ ತುರ್ತು ಆರ್ಥಿಕ ನೆರವನ್ನು ಘೋಷಿಸಿದೆ. ನಿತ್ಯ 300 ರೂ. ಹಣವನ್ನು ಸಂತ್ರಸ್ತ ಕುಟುಂಬಗಳಿಗೆ ನೀಡಲು ನಿರ್ಧರಿಸಿದೆ.
ಈ ನೆರವು ಪ್ರತಿ ಕುಟುಂಬದ ಗರಿಷ್ಠ ಇಬ್ಬರಿಗೆ ಸಿಗಲಿದೆ. ಒಂದು ವೇಳೆ ಕುಟುಂಬದ ಸದಸ್ಯರು ಅನಾರೋಗ್ಯಕ್ಕೆ ತುತ್ತಾಗಿದ್ದರೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಈ ನೆರವನ್ನು ವಿಸ್ತರಿಸುವುದಾಗಿ ಸರ್ಕಾರ ಹೇಳಿದೆ. ಇದರ ಜೊತೆಗೆ ಕೇರಳ ಸರ್ಕಾರ, ಸರ್ಕಾರಿ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ನಿರಾಶ್ರಿತರಿಗೆ ನೂರು ಕಲ್ಪಿಸಿಕೊಡಲು ಕೂಡ ಚಿಂತನೆ ನಡೆಸಿದೆ.
ದುರಂತದಲ್ಲಿ ಮಡಿದವರ ಕುಟುಂಬದ ವಿವಿಧ ಸಾಲ, ಮನೆ, ಆಸ್ತಿ ಸಾಲಗಳನ್ನು ಮನ್ನಾ ಮಾಡಲು ನಿರ್ವಹಣಾ ಸಮಿತಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬ್ಯಾಂಕ್ ಮುಖ್ಯಸ್ಥರು ಹೇಳಿದ್ದಾರೆ.
ಕೇರಳ ಬ್ಯಾಂಕ್ ಸೇರಿ ವಿವಿಧ ಬ್ಯಾಂಕ್ ಗಳಲ್ಲಿ ಈ ಭಾಗದ ಜನ ಸುಮಾರು 30 ಕೋಟಿ ರೂ. ಸಾಲ ಮಾಡಿದ್ದಾರೆ. ಇದರಲ್ಲಿ ಕೇರಳ ಬ್ಯಾಂಕ್ ಪಾಲು ಅಧಿಕ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದರೊಂದಿಗೆ ಕೇರಳ ಬ್ಯಾಂಕ್ ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ 50 ಲಕ್ಷ ರೂ. ನೀಡಿದ್ದು, ಅದರ ಉದ್ಯೋಗಿಗಳೂ ಸಹ ತಮ್ಮ 5 ದಿನದ ಸಂಬಳವನ್ನು ನಿಧಿಗೆ ನೀಡಲು ಮುಂದಾಗಿದ್ದಾರೆ.