ಬೆಂಗಳೂರು: ಕಾಫಿ ಶಾಪ್ನ ಮಹಿಳಾ ಟಾಯ್ಲೆಟ್ ಮೊಬೈಲ್ ಕ್ಯಾಮರಾ ಬಚ್ಚಿಟ್ಟು ವೀಡಿಯೋ ರೆಕಾರ್ಡ್ ಮಾಡಿರುವ ಘಟನೆ ನಡೆದಿದೆ.
ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಹಿಳಾ ಗ್ರಾಹಕರು ಕಾಫಿ ಶಾಪ್ನ ಟಾಯ್ಲೆಟ್ಗೆ ಹೋದಾಗ ಹಿಡೆನ್ ಕ್ಯಾಮೆರಾ ಪತ್ತೆಯಾಗಿದೆ. ಕೂಡಲೇ ಎಚ್ಚೆತ್ತುಕೊಂಡಿರುವ ಮಹಿಳೆ ಈ ಮಾಹಿತಿಯನ್ನು ಕೆಫೆ ಸಿಬ್ಬಂದಿಗೆ ತಿಳಿಸಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರಿನ ಹೆಣ್ಮಕ್ಕಳೇ ಹುಷಾರ್ ಎಂದು ಎಚ್ಚರಿಸಿದ್ದಾರೆ.
ಕೆಫೆಯ ವಾಶ್ ರೂಂನಲ್ಲಿ ಡಸ್ಟ್ ಬಿನ್ ಕವರ್ನಲ್ಲಿ ಯಾರಿಗೂ ಡೌಟ್ ಬರದಂತೆ ಫೋನ್ ಬಚ್ಚಿಡಲಾಗಿದ್ದು, ಸುಮಾರು ಎರಡು ಗಂಟೆಗಳ ಕಾಲ ರೆಕಾರ್ಡಿಂಗ್ನಲ್ಲಿತ್ತು. ಯಾವುದೇ ಕರೆಗಳು, ಮೆಸೇಜ್ ಬರದಂತೆ ಫೈಟ್ ಮೋಡ್ನಲ್ಲಿ ಇಡಲಾಗಿತ್ತು ಎನ್ನಲಾಗಿದೆ. ಲೇಡಿಸ್ ವಾಶ್ ರೂಂನಲ್ಲಿದ್ದ ಮೊಬೈಲ್ ಫೋನ್ ಅನ್ನು ಪರಿಶೀಲಿಸಿದಾಗ ಅದು ಕೆಫೆ ಸಿಬ್ಬಂದಿಗೆ ಸೇರಿದ ಫೋನ್ ಅನ್ನೋದು ಗೊತ್ತಾಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದ ಮಹಿಳೆ ಹಾಗೂ ಕೆಫೆ ಸಿಬ್ಬಂದಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರ ವಿಚಾರಣೆ ವೇಳೆ ಭದ್ರಾವತಿ ಮೂಲದ ಯುವಕನಿಂದ ಈ ಕೃತ್ಯ ನಡೆದಿದೆ ಅನ್ನೋದು ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ಯುವಕ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಮೊಬೈಲ್ ಫೋನ್ ವಶಕ್ಕೆ ಪಡೆದಿರುವ ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಇದೀಗ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ತಿಳಿದು ಬಂದಿದೆ.