ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ನೂತನ ಸಭಾಂಗಣದ ಉದ್ಘಾಟನೆ, 36ನೇ ವಾರ್ಷಿಕೋತ್ಸವ | ಭಾರತೀಯ ಸಂಸ್ಕೃತಿಯ ಬಗ್ಗೆ ನಮಗೆ ಹೆಮ್ಮೆಯಿರಲಿ: ಡಾ. ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ

ಪುತ್ತೂರು: ಭಾರತೀಯ ಸಂಸ್ಕೃತಿಗೆ ಜಗತ್ತಿನಲ್ಲೇ ಅತ್ಯಂತ ವಿಶಿಷ್ಟ ಸ್ಥಾನಮಾನವಿದೆ. ಅರ್ಥಪೂರ್ಣವಾಗಿ ಹಾಗೂ ಮೌಲ್ಯಯುತವಾಗಿ ಯಾವ ರೀತಿ ಬದುಕಬೇಕೆನ್ನುವ ಆದರ್ಶ ಜೀವನಶೈಲಿಯನ್ನು ಜಗತ್ತಿಗೆ ಕೊಟ್ಟ ಶ್ರೇಷ್ಠ ಪರಂಪರೆ ನಮ್ಮದಾಗಿದೆ. ನಮ್ಮ ಭಾರತೀಯ ಭವ್ಯ ಸಂಸ್ಕೃತಿಯನ್ನು ಹೆಮ್ಮೆಯಿಂದ ಗೌರವಿಸುವ ಮನಸ್ಸು ನಮ್ಮದಾಗಲಿ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಜೈನಕಾಶಿ ಮೂಡುಬಿದಿರೆಯ ಜೈನಮಠದ ಪರಮಪೂಜ್ಯ ಜಗದ್ಗುರು, ಭಾರತಭೂಷಣ, ಸ್ವಸ್ಥಿಶ್ರೀ ಡಾ. ಭಟ್ಟಾರಕ ಚಾರುಕೀರ್ತಿ  ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಹೇಳಿದರು.

ವಿವೇಕಾನಂದ ಕಾನೂನು ಮಹಾವಿದ್ಯಾಲಯದ 36ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ, ನೂತನ ಸಭಾಂಗಣ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಭಾರತೀಯ ಸಂಸ್ಕೃತಿಯ ಅಸ್ತಿತ್ವವು ಅದರ ಮೌಲ್ಯಗಳಲ್ಲಿ ತುಂಬಿಕೊಂಡಿದೆ. ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರಲ್ಲಿದೆ. ಕಾನೂನು ವಿದ್ಯಾರ್ಥಿಗಳಾಗಿ ಭಾರತೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಎಲ್ಲರಿಗೂ ನ್ಯಾಯ ಒದಗಿಸುವ ನಿಷ್ಠಾವಂತ ನ್ಯಾಯಾಧೀಶರು, ನ್ಯಾಯವಾದಿಗಳಾಗಿ ಕರ್ತವ್ಯ ನಿರ್ವಹಿಸಿ ಎಂದು ಕರೆ ನೀಡಿದರು.































 
 

ಮುಖ್ಯ ಅತಿಥಿಗಳಾಗಿ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಾವಾದಿ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಸಮಿತಿಯ ಸದಸ್ಯ, ನಿಕಟಪೂರ್ವ ಆಡಿಷನಲ್ ಅಡ್ವೋಕೇಟ್ ಜನರಲ್ ಅರುಣ್ ಶ್ಯಾಮ್ ಮಾತನಾಡಿ, ಒಬ್ಬ ಕಾನೂನು ವಿದ್ಯಾರ್ಥಿಯಾಗಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಕಳೆದ ಸಮಯವನ್ನು ಮೆಲುಕು ಹಾಕಿದರು. ಕಾನೂನು ವಿದ್ಯಾರ್ಥಿಗಳಿಗೆ ಇರುವ ಅವಕಾಶಗಳನ್ನು ವಿವರಿಸಿ ಶುಭಹಾರೈಸಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನವೀಯ ಚಿಂತನೆ ಇಟ್ಟುಕೊಂಡು ಬದುಕುತ್ತಿರುವ ಭಾರತೀಯರು ಎಂದಿಗೂ ಬೇರೆಯವರಿಗೆ ಕೆಟ್ಟದು ಮಾಡಲು ಹೋಗಿಲ್ಲ. ಅಂತಹ ವಿಶಿಷ್ಟ ಪರಂಪರೆಯ ಭಾಗಗಳಾಗಿರುವ ನಾವು ಸದೃಢ ಸಮಾಜದ ನಿರ್ಮಾಣಕ್ಕಾಗಿ ಪ್ರಜ್ಞಾವಂತ ನಾಗರಿಕರಾಗಿ ದುಡಿಯೋಣ. ಕಾನೂನು ವಿದ್ಯಾರ್ಥಿಗಳ ಮುಂದೆ ಈ ಅವಕಾಶವಿದ್ದು, ಬಳಸಿಕೊಳ್ಳಿ ಎಂದು ಕರೆ ನೀಡಿದರು.

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಸುರೇಂದ್ರ ಕಿಣಿ ಜಿ. ಶುಭಹಾರೈಸಿದರು. ಮಹಾವಿದ್ಯಾಲಯದ ಪ್ರಿನ್ಸಿಪಾಲ್ ಅಕ್ಷತಾ ಎ. ಪಿ. ಕಾಲೇಜಿನ ವಾರ್ಷಿಕ ಚಟುವಟಿಕೆಗಳ ಕುರಿತು ವರದಿ ಮಂಡಿಸಿದರು. ಇದೇ ವೇಳೆ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಪರಿಷತ್ ನ ಅಧ್ಯಕ್ಷ ಹೃತಿಕ್ ರಾಜ್ ವಿದ್ಯಾರ್ಥಿ ಪರಿಷತ್ ನಿಂದ ನಡೆಸಲಾದ ಕಾರ್ಯ ಚಟುವಟಿಕೆಗಳ ಕುರಿತು ವರದಿ ಮಂಡಿಸಿದರು. ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್ ಎಂ., ವಿವೇಕಾನಂದ ಮಹಾವಿದ್ಯಾಲಯದ  ಸಂಚಾಲಕ ವಿಜಯನಾರಾಯಣ ಕೆ. ಎಂ., ಕಾನೂನು ಅದ್ಯಯನ ವಿಭಾಗದ ನಿರ್ದೇಶಕ ಡಾ. ಬಿ. ಕೆ. ರವೀಂದ್ರ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಸುಭಾಷಿಣಿ ಜೆ., ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಪರಿಷತ್ ನ ಕಾರ್ಯದರ್ಶಿ ಕು. ಮಾಳವಿಕ, ಜತೆ ಕಾರ್ಯದರ್ಶಿ ಅರ್ಪಿತಾ ಪ್ರಶಾಂತ್ ಉಪಸ್ಥಿತರಿದ್ದರು.

ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀಕಾಂತ ರೈ ಅನಿಕೂಟೇಲ್ ಸ್ವಾಗತಿಸಿ, ಪ್ರಾಧ್ಯಾಪಕಿ ಶ್ವೇತಾ ವಿಶ್ವೇಶ್ವರ ಹೆಗಡೆ ವಂದಿಸಿದರು. ವಿದ್ಯಾರ್ಥಿನಿ ಪ್ರಿಯಾ ಎಸ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಗಾಯತ್ರಿ ಎನ್. ವೈಯಕ್ತಿಕ ಗೀತೆ ಹಾಡಿದರು.

ವಿವೇಕಾನಂದ ಕಾನೂನು ವಿದ್ಯಾಲಯದಲ್ಲಿ ನೂತನವಾಗಿ ನಿರ್ಮಿಸಲಾದ ಸಭಾಂಗಣಕ್ಕೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ದೃಶ್ಯ ಮಾಧ್ಯಮದ ಮೂಲಕ ನೂತನ ಸಭಾಂಗಣಕ್ಕೆ ‘ಸುಜ್ಞಾನ ದೀಪಿಕಾ’ ಎನ್ನುವ ಹೆಸರನ್ನು ಅನಾವರಣಗೊಳಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top