ಪುತ್ತೂರು: ಬಾಂಗ್ಲಾದಲ್ಲಿ ಅರಾಜಕತೆ ಉಂಟಾಗಿ ಘಟರ್ಷಣೆಗಳು ನಡೆಯುತ್ತಿದ್ದು, ಹಿಂದೂಗಳನ್ನು ಹತ್ಯೆ ಮಾಡುವ ಮೂಲಕ ದೌರ್ಜನ್ಯ ಎಸಗಲಾಗುತ್ತಿದೆ. ತಕ್ಷಣ ಕೇಂದ್ರ ಸರಕಾರ ಅಲ್ಲಿನ ಹಿಂದೂಗಳ ರಕ್ಷಣೆಗೆ ಅಲ್ಲಿನ ಸರಕಾರಕ್ಕೆ ಒತ್ತಡ ತರಬೇಕು ಎಂದು ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ.ಕೃಷ್ಣಪ್ರಸನ್ನ ಆಗ್ರಹಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹಲವಾರು ಸಮಯಗಳಿಂದ ಅಲ್ಲಿನ ಹಿಂದೂ ಧಾರ್ಮಿಕ ಸಂಸ್ಥೆಗಳು, ಹಿಂದೂಗಳ ವ್ಯಾಪಾರ ಸಂಸ್ಥೆಗಳು, ಹಿಂದೂಗಳ ಮನೆಯಗಳನ್ನು ಗುರಿಯಾಗಿಸಿಕೊಂಡು ದಾಳ ನಡೆಸಲಾಗುತ್ತಿದೆ. ಈಗಾಗಲೇ ದಾಳಿ ಪರಿಣಾಮ ಹಿಂದೂಗಳ ರುದ್ರಭೂಮಿ, 100 ಕ್ಕೂ ಅಧಿಕ ದೇವಾಲಯಗಳಿಗೆ ಹಾನಿಯಾಗಿದೆ. ಅಲ್ಪಸಂಖ್ಯಾತ ಹಿಂದೂಗಳ ಸ್ಥಿತಿ ಹದಗೆಡುತ್ತಿದೆ. ಈ ರೀತಿ ಮಾಡುತ್ತಿರುವ ನಾಚಿಗೇಡಿನ ಪರಮಾವಧಿಯಾಗಿದ್ದು, ಇದನ್ನು ನಾವು ಉ್ರಗವಾಗಿ ಖಂಡಿಸುತ್ತೇವೆ ಎಂದು ಹೇಳಿದರು.
ಅಲ್ಲಿನ ಪ್ರಸ್ತುತ ಸರಕಾರವನ್ನು ಇಳಿಸಿ ಅರಾಜಕತೆ ಸೃಷ್ಟಿಸಿ ಹಿಂದೂಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಹಿಂದೂ ರಕ್ಷಣೆಗೆ ಕೇಂದ್ರ ಸರಕಾರ ಒತ್ತಡ ತರಬೇಕು. ಎಲ್ಲಿ ಹಿಂದೂಗಳು ನಮ್ಮ ದೇಶಕ್ಕೆ ಮರಳಿದರೆ ಅವರಿಗೆ ಇಲ್ಲಿ ಸೂಕ್ತ ನೆಲೆ ಕಲ್ಪಿಸಬೇಕಾದ ಆಗತ್ಯವಿದೆ ಎಂದು ಆಗ್ರಹಿಸಿದ ಅವರು, ಈಗಾಗಲೇ ಈ ಕುರಿತು ವಿಶ್ವ ಹಿಂದೂ ಪರಿಷದ್ ರಾಷ್ಟ್ರ ಪ್ರಮುಖರು ಕೇಂದ್ರ ಸರಕಾರದ ಗೃಹಮಂತ್ರಿಗಳಿಗೆ ಈ ಕುರಿತು ಮನವಿ ಮೂಲಕ ಮನವರಿಕೆ ಮಾಡಿದ್ದಾರೆ ಎಂದು ತಿಳಿಸಿದರು.
ಈಗಾಗಲೇ ಪರಿಸ್ಥಿತಿಯನ್ನು ಬಳಸಿಕೊಂಡು ಬಾಂಗ್ಲಾ ವಾಸಿಗಳು ಭಾರತದೊಳಗೆ ನುಸುಳುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕುರಿತು ಭಾರತ ಸರಕಾರ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಮೂಲಕ ಜಾಗ್ರತೆ ವಹಿಸಬೇಕಾದ ಅಗತ್ಯವಿದೆ ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯಾ, ಕೋಶಾಧಿಕಾರಿ ಮಾಧವ ಪೂಜಾರಿ, ಜಿಲ್ಲಾ ಸಹಕಾರ್ಯದರ್ಶಿ ಶ್ರೀಧರ ತೆಂಕಿಲ ಉಪಸ್ಥಿತರಿದ್ದರು.