ಉನ್ನತ ಶಿಕ್ಷಣ ವ್ಯವಸ್ಥೆ–ಆದ್ಯತೆಯಿಲ್ಲದ ಕಾರ್ಯಯೋಜನೆಗಳು : ಕೆ. ಚಿನ್ನಪ್ಪ ಗೌಡ

ಮಕ್ಕಳಿಗೆ ವಿವಿಧ ಹಂತದ ಶಿಕ್ಷಣವನ್ನು ನೀಡುವ ಶಾಲಾ ಕಾಲೇಜುಗಳು ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನು ನೀಡುವ ಕನಸನ್ನು ಹೊಂದಿವೆ. ಇತ್ತೀಚಿನ ದಿನಗಳಲ್ಲಿ ಸ್ಥಾಪನೆಯಾಗುತ್ತಿರುವ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಅವುಗಳ ನಾಮಫಲಕದಲ್ಲಿ International ಎಂಬ ವಿಶೇಷಣವನ್ನು ಸೇರಿಸಿ ಹೆಸರು ಹಾಕುವುದನ್ನು ನೋಡುತ್ತೇವೆ. ಈ ಅಂತರರಾಷ್ಟ್ರೀಯ ಎಂದರೆ ಏನು  ಎಂದು ಕೇಳಿದರೆ ಸ್ಪಷ್ಟ ಉತ್ತರ ಇಲ್ಲ. ಕಟ್ಟಡ, ಕಿಟಿಕಿ ಬಾಗಿಲುಗಳು, ಪೀಠೋಪಕರಣಗಳು, ತರಗತಿಗಳು, ಶಿಕ್ಷಕರು, ಬಸ್ ವ್ಯವಸ್ಥೆ , ಸಮವಸ್ತ್ರ, ಭದ್ರತಾ ಸಿಬ್ಬಂದಿ ಇತ್ಯಾದಿ ಸವಲತ್ತುಗಳ ಪಟ್ಟಿ ನೀಡುತ್ತಾರೆ. ಈ ಸವಲತ್ತುಗಳೆಲ್ಲವೂ ಲೋಕಲ್ ಮೇಡ್ ಹೊರತು ಇದರಲ್ಲಿ ಇಂಟರ್ನ್ಯಾಷನಲ್ ಏನಿದೆ ? ಎಂದು ಕೇಳಿದರೆ ” ನಮ್ಮದು ಇಂಗ್ಲೀಷ್ ಮಾಧ್ಯಮ. ಅತ್ಯುತ್ತಮ ಶಿಕ್ಷಕರಿದ್ದಾರೆ” ಎಂದು ಹೇಳಿ ಸ್ಟೇಟ್ ಸಿಲೆಬಸ್, ನ್ಯಾಷನಲ್ ಸಿಲೆಬಸ್ ಎಂದು ಹೇಳಿ ಅವುಗಳ ನಮೂನೆವಾರು ಪಟ್ಟಿ ಮಂಡಿಸುತ್ತಾರೆ. ” ಹೌದು, ಮಕ್ಕಳು ಇಲ್ಲಿಯವರು, ಹೆತ್ತವರು ಇಲ್ಲಿಯವರು, ಈ ಮಕ್ಕಳನ್ನು ಅದು ಹೇಗೆ ಇಂಟರ್ನ್ಯಾಷನಲ್ ಮಾಡುತ್ತೀರಿ ?ಎಂದು ಕೇಳಿದರೆ , ಇಲ್ಲಿ ಶಿಕ್ಷಣ ಪಡೆದವರಿಗೆ ವಿದೇಶಗಳಲ್ಲಿ ಉದ್ಯೋಗ ಸಿಗುತ್ತದೆ ಎಂಬ ಉತ್ತರವನ್ನು ಖಚಿತ ಭರವಸೆಯೊಂದಿಗೆ ನೀಡುತ್ತಾರೆ. ವಿದೇಶಗಳು ಎಂದರೆ ಯಾವ ಯಾವ ದೇಶಗಳು ಎಂದು ಕೇಳಿದರೆ ಸಿಟ್ಟಾಗುತ್ತಾರೆ. ” ನಮ್ಮದು  ಇಂಟರ್ನ್ಯಾಷನಲ್ ,ಆಯಿತಲ್ಲ. ನಿಮಗೇನು ಸಮಸ್ಯೆ?  ನಿಮ್ಮ ಮಕ್ಕಳನ್ನು ಸೇರಿಸಬೇಡಿ ” ಎಂದು ಹೇಳಿ ಮಾತು ಮುಗಿಸುತ್ತಾರೆ. ಆರಂಭ ಹಂತದ ಶಿಕ್ಷಣ ವ್ಯವಸ್ಥೆಯಲ್ಲಿ ಮಿನುಗುತ್ತಿರುವ ಇಂಟರ್ನ್ಯಾಷನಲ್ ಪದದ ಬಳಕೆಯ ಕುರಿತ ಚರ್ಚೆಯನ್ನು ಸದ್ಯ ಇಲ್ಲಿಗೆ ನಿಲ್ಲಿಸುತ್ತೇನೆ. ನಮ್ಮ ಭಾಷೆ, ನೆಲ, ಸಂಸ್ಕೃತಿ, ಬದುಕಿನ ರೀತಿ ರಿವಾಜುಗಳ ಬೇರುಗಳನ್ನು ಕಳೆದುಕೊಳ್ಳುವುದು ಇಂಟರ್ನ್ಯಾಷನಲ್ ಆಗಲಾರದು ಎಂಬ ಕನಿಷ್ಠ ತಿಳುವಳಿಕೆಯೂ ಇವರಿಗಿಲ್ಲ.

ವಿಶ್ವವಿದ್ಯಾನಿಲಯಗಳಂತಹ ಉನ್ನತ ಶಿಕ್ಷಣ ರಂಗದಲ್ಲಿ ಈ ಇಂಟರ್ನ್ಯಾಷನಲ್ ಪದದ ಬಳಕೆ ಬಹಳ ರೋಚಕವಾಗಿದೆ. ಮಾತು ತೆಗೆದರೆ ಕೆಲವು ವಿವಿಗಳ ಕುಲಪತಿಗಳು ” Our University is the University with a Difference ” ಎಂದು ಘೋಷಣೆ ಮಾಡುವುದನ್ನು ಕಾಣುತ್ತೇವೆ. ಇದಕ್ಕೆ ಪೂರಕವಾಗಿ ರಾಷ್ಟ್ರೀಯ, ಅಂತರರಾಷ್ಟ್ರೀಯ Ranking System ನ್ನು ಪ್ರಸ್ತಾವಿಸುತ್ತಾರೆ. ಇಂಟರ್ನ್ಯಾಷನಲ್ ಗುಣಮಟ್ಟದ ಪ್ರಸ್ತಾವ ಮಾಡುತ್ತಾರೆ. ಯಾವುದೇ ಒಂದು ವಿಶ್ವವಿದ್ಯಾನಿಲಯ ಅಂತರರಾಷ್ಟ್ರೀಯ ಗುಣಮಟ್ಟದ ಕಡೆಗೆ ಗಮನಕೊಟ್ಟು ಪ್ರಾಮಾಣಿಕವಾಗಿ ಕಾರ್ಯಯೋಜನೆಗಳನ್ನು ತಯಾರಿಸಿ ಅನುಷ್ಠಾನ ಮಾಡುವುದನ್ನು ನಾವು ಸ್ವಾಗತಿಸಬೇಕು. ಅದನ್ನು ವಿರೋಧಿಸುವುದು ಸರಿಯಲ್ಲ. ಆದರೆ  ಈ ಇಂಟರ್ನ್ಯಾಷನಲ್ ಪದದ ಬಳಕೆಯನ್ನು ವಿಶ್ವವಿದ್ಯಾನಿಲಯಗಳು ಎಗ್ಗಿಲ್ಲದೆ ಬಳಸುವುದು ಮತ್ತು ವಿಶ್ವವಿದ್ಯಾನಿಲಯದ ಆಂತರಿಕ ಆರ್ಥಿಕ ಸಂಪನ್ಮೂಲಗಳನ್ನು ದುರ್ಬಳಕೆ ಮಾಡುವುದು ತಪ್ಪು.  ವಿದ್ಯಾರ್ಥಿಗಳು, ಪೋಷಕರು ಮತ್ತು ಇಡಿಯ ಸಮಾಜದ ಶೈಕ್ಷಣಿಕ ಚಿಂತನೆಯ ದಾರಿ ತಪ್ಪಿಸಲು ಈ ಪದವನ್ನು ಮಂತ್ರದಂಡದಂತೆ ಬಳಸುವುದು ತಪ್ಪಾಗುತ್ತದೆ. ಈ ಪದ ಆಕರ್ಷಕ ಅಂತ ಕಂಡರೂ ಇದರಿಂದ ಉನ್ನತ ಶಿಕ್ಷಣ ಸಂಸ್ಥೆಗಳು ದಾರಿ ತಪ್ಪಿದ ಪ್ರಸಂಗಗಳಿವೆ. ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಿ ಅವರಿಗೆ ಮೋಸ ಮಾಡಿದ ಘಟನೆಗಳಿವೆ. ವಿದ್ಯಾರ್ಥಿಗಳು ತೆರುವ ಶಿಕ್ಷಣ ಶುಲ್ಕವನ್ನು ದುರ್ಬಳಕೆ ಮಾಡಿದ ಉದಾಹರಣೆಗಳಿವೆ.

ಸರಕಾರ ಅಂಗೀಕರಿಸಿದ ಕರ್ನಾಟಕ ವಿಶ್ವವಿದ್ಯಾನಿಲಯ ಅನುಶಾಸನವನ್ನು ಇಟ್ಟುಕೊಂಡು ನಮ್ಮ ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳು ಅದರ ಆಧಾರದಲ್ಲಿಯೇ ಅವುಗಳ ಪ್ರತ್ಯೇಕ ಅನುಶಾಸನವನ್ನು ಸಿದ್ಧಪಡಿಸಿಕೊಂಡಿರುತ್ತವೆ( University Act). ಪ್ರತಿ ವಿಶ್ವವಿದ್ಯಾನಿಲಯದ ಅನುಶಾಸನದ ಆರಂಭದಲ್ಲಿ Preamble ಇರುತ್ತದೆ. ಅದರಲ್ಲಿ ನಿರ್ದಿಷ್ಟ ವಿಶ್ವವಿದ್ಯಾನಿಲಯದ ಸ್ಥಾಪನೆಯ ಧ್ಯೇಯೋದ್ದೇಶಗಳನ್ನು ವಿವರಿಸುವ ಪ್ರಸ್ತಾವನೆ ಇರುತ್ತದೆ.  ವಿಶ್ವವಿದ್ಯಾನಿಲಯದ ಆಡಳಿತಕ್ಕೊಳಪಡುವ ಭೌಗೋಳಿಕ ವ್ಯಾಪ್ತಿಯನ್ನು ಹೇಳಿ ನಂತರ ಉದ್ದೇಶಗಳನ್ನು ಪಟ್ಟಿ ಮಾಡಲಾಗಿರುತ್ತದೆ. ವಿವಿಗಳ Vision & Missionನಲ್ಲಿಯೂ ಇದನ್ನು ನೋಡಬಹುದು. ಕ್ರೋಢೀಕರಿಸಿ ಹೇಳುವುದಾದರೆ , ವಿಶ್ವವಿದ್ಯಾನಿಲಯವನ್ನು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸುವಂತೆ ಅಂತರರಾಷ್ಟ್ರೀಯ ಸಂಸ್ಥೆಯಾಗಿ  ರೂಪಿಸುವ, ಸ್ಥಳೀಯ ಜನರ ಸಾಮಾಜಿಕ, ಆರ್ಥಿಕ ಹೀಗೆ ಎಲ್ಲಾ ರೀತಿಯ ಅಭಿವೃದ್ಧಿಗೆ ಶ್ರಮಿಸುವ, ಸ್ಥಳೀಯ ಸಮಸ್ಯೆಗಳನ್ನು ಅಧ್ಯಯನ ಮಾಡಿ ಅವುಗಳಿಗೆ ಪರಿಹಾರಗಳನ್ನು ಸೂಚಿಸಿ ಜನರ ಜೀವನ ಮಟ್ಟವನ್ನು ಹೆಚ್ಚಿಸಲು ಮಾರ್ಗದರ್ಶನ ನೀಡುವ , ಸ್ಥಳೀಯ ಸಾಂಸ್ಕೃತಿಕ ಪರಂಪರೆಗಳನ್ನು ದಾಖಲಿಸುವ, ಸಂರಕ್ಷಣೆ ಮಾಡುವ, ಸಂವರ್ಧಿಸುವ ಮತ್ತು ದೇಶೀಯ ಜ್ಞಾನಪರಂಪರೆಯನ್ನು ಉಳಿಸಿ ಪ್ರಸಾರ ಮಾಡುವ –  ಧ್ಯೇಯಗಳು ಪ್ರಸ್ತಾವನೆಯಲ್ಲಿರುತ್ತವೆ. ಇವುಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಆದ್ಯತೆಯ ಮೇರೆಗೆ ಕಾರ್ಯಯೋಜನೆಯಗಳನ್ನು ಸರಕಾರ, ಸಿಂಡಿಕೇಟ್, ವಿದ್ಯಾವಿಷಯಕ ಪರಿಷತ್ ನಿರ್ದೇಶನ ಮತ್ತು ಅನುಮತಿಯೊಂದಿಗೆ, ಮತ್ತಿತರ ನಿಯಮಾವಳಿಗಳನ್ನು ರೂಪಿಸಿ ಅನುಷ್ಠಾನ ಮಾಡುವುದು ಕುಲಪತಿಯವರ ಜವಾಬ್ದಾರಿ ಮತ್ತು ಕರ್ತವ್ಯ. ವಿಶ್ವವಿದ್ಯಾನಿಲಯದ ಧ್ಯೇಯೋದ್ಧೇಶಗಳ ಮಹತ್ವವನ್ನು ಅರಿಯದೆ ,  ಅಭಿವೃದ್ಧಿ ಯೋಜನೆಗಳನ್ನು ಆದ್ಯತೆ ಬಿಟ್ಟು ಕಾರ್ಯಗತಗೊಳಿಸಿ , ಇಂಟರ್ನ್ಯಾಷನಲ್ ಪದವನ್ನು ವಿವಿ ವರಿಷ್ಟರು ಜಪಿಸಿದ್ದರಿಂದ ಕೆಲವು ವಿವಿಗಳು ಬಹುಬಗೆಯ ಸಂಕಷ್ಟದಲ್ಲಿ ಇಂದು ಸಿಲುಕಿಕೊಂಡಿವೆ.  ಹಳೆಯ ಮೈಸೂರು, ಬೆಂಗಳೂರು, ಕರ್ನಾಟಕ ವಿವಿಗಳು ಮತ್ತು ಇತರ ಕೆಲವು ಹೊಸ  ವಿವಿಗಳು ಆರಂಭದ ವರ್ಷಗಳಲ್ಲಿ ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ಅವುಗಳ ಸ್ಥಾಪನೆಯ ಉದ್ದೇಶಗಳನ್ನು ಬಹಳ ಚೆನ್ನಾಗಿ ಈಡೇರಿಸಿವೆ ಮತ್ತು ಸಮತೋಲನದಿಂದ ಕೆಲಸ ಮಾಡಿವೆ ಎಂದು ನನಗನ್ನಿಸಿದೆ.



































 
 

ಮಂಗಳೂರು ವಿಶ್ವವಿದ್ಯಾನಿಲಯವು ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ ಎಂಬುದನ್ನು ಈ ವಿಶ್ವವಿದ್ಯಾನಿಲಯವೇ ಒಪ್ಪಿಕೊಂಡಿದೆ. ಸರಕಾರದ ಅನುದಾನದ ಕೊರತೆ ಇದಕ್ಕೆ ಕಾರಣ ಎಂದು ಹೇಳಲಾಗುತ್ತದೆ‌. ಇದು ಪೂರ್ತಿ ಸತ್ಯ ಅಲ್ಲ. ವಿವಿಯ ಆರ್ಥಿಕ ಸಂಕಷ್ಟಕ್ಕೆ ದಿವಾಳಿತನಕ್ಕೆ ಸರಕಾರವನ್ನು ಏಕಾಏಕಿ ದೂರುವುದು ಸರಿಯಲ್ಲ. ಸರಕಾರದ ಅನುದಾನದಲ್ಲಿ ಇಳಿಕೆ ಆಗಿರಬಹುದು. ಬ್ಲಾಕ್ ಗ್ರಾಂಟ್ ಮತ್ತು ಡೆವಲಪ್‌ಮೆಂಟ್ ಗ್ರಾಂಟ್ ಮತ್ತು ಕೆಲವೊಮ್ಮೆ ವಿಶೇಷ ಅನುದಾನವನ್ನು ಸರಕಾರ ನೀಡುತ್ತಾ ಬರುತ್ತದೆ. ಅಭಿವೃದ್ಧಿ ಅನುದಾನ ಇತ್ತೀಚೆಗೆ ಕಡಿಮೆಯಾಗಿದೆ ನಿಜ. ಪ್ರವೇಶಾತಿ, ಪರೀಕ್ಷೆ, ಕ್ರೀಡೆ, ಸಾಂಸ್ಕೃತಿಕ, ಅಂಕಪಟ್ಟಿ, ಮರುಮೌಲ್ಯಮಾಪನ, ಸಂಯೋಜನೆ ಹೀಗೆ ಹತ್ತಾರು  ಶೀರ್ಷಿಕೆಗಳಲ್ಲಿ ವಿಶ್ವವಿದ್ಯಾನಿಲಯ ಆದಾಯ ಗಳಿಸುತ್ತದೆ. ಇದರಲ್ಲಿ ನಿರ್ವಹಣೆಗೆ, ಅತಿಥಿ ಉಪನ್ಯಾಸಕರು ಮತ್ತು ಇತರ ತಾತ್ಕಾಲಿಕ ಉದ್ಯೋಗಿಗಳ ಸಂಬಳ ಹೀಗೆ ವೆಚ್ಚವೂ ಇದೆ. ಆದರೂ ವಿವಿಗಳು ಉಳಿಕೆ ಮಾಡಿ ಠೇವಣಿ ಇಡುವ ಪರಂಪರೆ ಇತ್ತು. ಹಾಗೆ ಉಳಿಕೆಯಾದ ಮೊತ್ತವನ್ನು ಅಭಿವೃದ್ಧಿಯ ಹೆಸರಲ್ಲಿ ಕಟ್ಟಡಗಳನ್ನು ಕಟ್ಟುವ ತರಾತುರಿಯಲ್ಲಿ, ಇಂಟರ್ನ್ಯಾಷನಲ್ ಮೋಹದಲ್ಲಿ  ಕರಗಿಸಿದ್ದು ವಾಸ್ತವ ಸತ್ಯ.  ಇಲ್ಲಿ ಆದ್ಯತೆಯನ್ನು ಮರೆತದ್ದೂ ಆಯಿತು. ಇದಕ್ಕೆ ಕಣ್ಣಿಗೆ ಕಾಣುವ ಒಂದು ಉದಾಹರಣೆ  ಮಂಗಳೂರು ವಿವಿ ಇಂಟರ್ನ್ಯಾಷನಲ್ ಹಾಸ್ಟೆಲ್!. ನನಗೆ ತಿಳಿದಿರುವ ಹಾಗೆ ಇಲ್ಲಿಗೆ ಪ್ರವೇಶ ಬಯಸಿ ಬರುವುದು ಸಾರ್ಕ್ ದೇಶದ ವಿದ್ಯಾರ್ಥಿಗಳು. ಕೇಂದ್ರ ಸರಕಾರದ ಉನ್ನತ ಶಿಕ್ಷಣ ವಿನಿಮಯ ಯೋಜನೆಯಡಿಯಲ್ಲಿ ಬರುತ್ತಾರೆ. ಹೆಚ್ಚುಕಡಿಮೆ ನೂರೈವತ್ತು ವಿದೇಶಿ ವಿದ್ಯಾರ್ಥಿಗಳು. ಈ ವಿದೇಶಿ ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಬಂತು ನೋಡಿ ಇಂಟರ್ನ್ಯಾಷನಲ್ ಹಾಸ್ಟೆಲ್!  ಐವತ್ತಾರು ಕೋಟಿಯ ಯೋಜನೆ!  ಕಟ್ಟಡದ ಕೆಲಸ ಆರಂಭವಾಗಿ ಹತ್ತಿರ ಹತ್ತು ವರ್ಷ! ಬಹು ಮಹಡಿಯ ಕಟ್ಟಡದ ಗೋಡೆಗಳು ಎದ್ದಿವೆ! ಸ್ಲ್ಯಾಬ್ ಗಳು ಮುಚ್ಚಿವೆ! ಸಾರಣೆ ಸುಣ್ಣ ಬಣ್ಣ ಆದಂತಿದೆ! ಫ್ಲೋರಿಂಗ್, ವಯರಿಂಗ್ ಫರ್ನಿಷಿಂಗ್ ಹೀಗೆ ವೆಚ್ಚದಾಯಕ ಕಾಮಗಾರಿ ಬಾಕಿ ಇದೆ! ಈ ಪಾಳುಬಿದ್ದ ಕಟ್ಟಡಗಳ  ಇದರ ಉದ್ಘಾಟನೆ ಆಗಿದೆ ಎಂದರೆ ನಂಬುತ್ತೀರ! ವಿವಿಯಲ್ಲಿ ಕಾಮಗಾರಿ ಮುಗಿಸಲು ದುಡ್ಡಿಲ್ಲ. ಕಟ್ಟಡ ಸಮುಚ್ಚಯದ ಅರ್ಧದಷ್ಟು ಕಾಮಗಾರಿಯೂ ಮುಗಿದಿಲ್ಲ. ಎಷ್ಟು ಪಾವತಿಯಾಗಿದೆ, ಎಷ್ಟು ಬಾಕಿ ಇದೆ ಗೊತ್ತಿಲ್ಲ.  ವಿದೇಶೀ ವಿದ್ಯಾರ್ಥಿಗಳ ಬಳಕೆಗೆ ಲಭ್ಯವಿಲ್ಲ. ಆದಾಯವಿಲ್ಲ. ಖರ್ಚು ಮಾಡಿ ಕೆಲಸ ಮುಗಿಸಲು ಹಣವಿಲ್ಲ. ಈ ಇಂಟರ್ನ್ಯಾಷನಲ್ ಹಾಸ್ಟೆಲ್ ನ ನಿರ್ಮಾಣವನ್ನು ಯಾವ ರೀತಿಯಿಂದಲೂ ಸಮರ್ಥಿಸಲು ಸಾಧ್ಯವಿಲ್ಲ. ಇಂತಹ ಬೃಹತ್ ಆದರೆ ಬಳಕೆಗೆ ಸಿಗದ ( ಸಿಕ್ಕರೂ) ಹಾಸ್ಟೆಲ್ ನಿಂದ ವಿವಿಯ ಅಂತರರಾಷ್ಟ್ರೀಯ ಶೈಕ್ಷಣಿಕ   ಗುಣಮಟ್ಟ ಹೆಚ್ಚಾಗುತ್ತದೆ ಎಂದು ಅನ್ನಿಸುವುದಿಲ್ಲ. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಕ್ರಮ ತೆಗೆದುಕೊಳ್ಳದೆ ಕಟ್ಟಡಗಳನ್ನು ಕಟ್ಟುವ ಮೂಲಕ ಏನನ್ನು ಸಾಧಿಸಲಾಗುತ್ತದೆ . ಇದರ ಲಾಭವನ್ನು  ಯಾರು ಉಂಡಿರಬಹುದು?  ಓದುಗರ ಯೋಚನೆಗೆ ಬಿಡುತ್ತೇನೆ. ನಮ್ಮ ವಿದ್ಯಾರ್ಥಿಗಳ ಪೋಷಕರು ನೀಡಿದ ಹಣದ ವಿನಿಯೋಗ ನಮ್ಮ ವಿದ್ಯಾರ್ಥಿಗಳ ( Stakeholders) ಶೈಕ್ಷಣಿಕ ಕ್ಷೇಮಾಭಿವೃದ್ಧಿಗೆ ಒದಗದೆ ಇರುವುದು ನಿಜಕ್ಕೂ ದುರಂತ!

ಮಂಗಳೂರು ವಿಶ್ವವಿದ್ಯಾನಿಲಯವು ಇನ್ನೇನು ಕೆಲವೇ ವರ್ಷಗಳಲ್ಲಿ ಸ್ಥಾಪನೆಯ ಸುವರ್ಣ ಮಹೋತ್ಸವ ಆಚರಿಸಲಿದೆ. ಇಷ್ಟಾಗಿ ನಮ್ಮ ವಿಶ್ವವಿದ್ಯಾನಿಲಯವು  ಪೂರ್ಣಪ್ರಮಾಣದ ಸುಸಜ್ಜಿತ ಕ್ರೀಡಾಂಗಣ ಹೊಂದಿಲ್ಲ. ಸರ್ವ ಸೌಕರ್ಯಗಳಿರುವ ಪರೀಕ್ಷಾ ಭವನ ಇಲ್ಲ. ಕಾರ್ಯವೆಸಗುತ್ತಿರುವ ಕೆಲವು ಕಟ್ಟಡಗಳು ನ್ಯೂನತೆಗಳಿಂದ ಬಳಲುತ್ತಿವೆ. ಸೋಲಾರ್ ವ್ಯವಸ್ಥೆ, ವಿವಿ ಆವರಣ ಕೇಂದ್ರಿತ ಸಿಸಿಟಿವಿ ಕ್ಯಾಮರಾ ವ್ಯವಸ್ಥೆ ಎಲ್ಲಾ ಆಗಿದ್ದು ಪ್ರಯೋಜನಕ್ಕಿಲ್ಲ. Echo friendly campus ಎಂದು ಘೋಷಿಸಲಾಗಿದ್ದು ಬ್ಯಾಟರಿ ಚಾಲಿತ ವಾಹನಗಳು ಮಾತ್ರ ವಿವಿ ಆವರಣದಲ್ಲಿ ಓಡಾಡಲಿದೆ ಎಂದು ಪ್ರಕಟನೆ ಕೊಟ್ಟಾಗಿದೆ! ಈ ಅಂಶಗಳನ್ನು ಇಲ್ಲಿ ನಾನು ಪ್ರಸ್ತಾವಿಸುತ್ತಿರುವುದು ವ್ಯಂಗ್ಯಕ್ಕಲ್ಲ. ಬೇಸರ ಮತ್ತು ನೋವಿನಿಂದ.  ವಿವಿಯಲ್ಲಿ ದುಡಿದ ನನಗಿಂತ ಹಿರಿಯರು,  ನಾನು ಇವತ್ತು ಪಿಂಚಣಿ ಬರುತ್ತದೋ ಇಲ್ಲವೋ ಎಂಬ ಆತಂಕದಲ್ಲಿ ಇರಬೇಕಾದ ದುಸ್ಥಿತಿಯಲ್ಲಿ ನಮ್ಮನ್ನು ಅಣಕಿಸುವುದು ಇತ್ತೀಚೆಗೆ ಚಾಲ್ತಿಗೆ ಬಂದ ಇಂಟರ್ನ್ಯಾಷನಲ್ ಸ್ಟಾಂಡರ್ಡ್ ಎಂಬ ಪದಸಮುಚ್ಚಯ.  ನಮ್ಮ ವಿವಿಯ ವ್ಯಾಪ್ತಿಯಲ್ಲಿ ಯಕ್ಷಗಾನದಂತಹ ಶ್ರೀಮಂತ ಕಲಾಪ್ರಕಾರಗಳಿವೆ. ಜೀವಂತ ಜನಪದ ಮಹಾಕಾವ್ಯ ಪರಂಪರೆಗಳಿವೆ. ಸಮೃದ್ಧ ಆರಾಧನಾ ಸಂಪ್ರದಾಯಗಳಿವೆ. ಹತ್ತಾರು ಗ್ರಾಮೀಣ ಕುಲಕಸುಬುಗಳಿವೆ. ದೇಶೀಯ ವೈದ್ಯ ಪರಂಪರೆ ಇದೆ. ಪ್ರಾಕೃತಿಕ ಸಂಪತ್ತುಗಳಿವೆ. ಇಂತಹ ಕರಾವಳಿ ಭಾಗದ ಶಕ್ತಿ ಸಾಮರ್ಥ್ಯವನ್ನು ಶೋಧಿಸುವ , ಅರಿವನ್ನು ಮರುಕಟ್ಟುವ , ಮಾಹಿತಿಗಳನ್ನು ಮರುವ್ಯಾಖ್ಯಾನಕ್ಕೆ ಒಳಪಡಿಸುವ ಕೆಲಸ ಸ್ವಲ್ಪ ಮಟ್ಟಿಗೆ ನಡೆದಿದೆ. ಇವುಗಳನ್ನು ಬಲಪಡಿಸಿದರೆ ವಿವಿಯ ಅಂತರರಾಷ್ಟ್ರೀಯ ಮನ್ನಣೆ ಗಳಿಸುವ ಕನಸಿಗೆ ಹೊಸ ಅರ್ಥ ಬರುತ್ತದೆ. ವಿವಿಯ ಘನತೆ ಕಟ್ಟಡಗಳಲ್ಲಿ ಇರುವುದಿಲ್ಲ. ವೈಭವೀಕೃತ ಘೋಷಣೆಗಳಿಂದ ಪ್ರಯೋಜನವಿಲ್ಲ. ಅಲ್ಲಿ ನಡೆಯುವ ಶೈಕ್ಷಣಿಕ ಸಂಶೋಧನೆ ಮತ್ತು ಜ್ಞಾನದ ಆನ್ವಯಿಕ ನೆಲೆಗಳಲ್ಲಿ ಇರುತ್ತದೆ ಎಂಬುದನ್ನು ವಿಶ್ವವಿದ್ಯಾನಿಲಯವನ್ನು ಮುನ್ನಡೆಸಿದವರು  ಅರಿತಿದ್ದರೆ ಈ ಸಂಕಷ್ಟ ವಿವಿಗಳಿಗೆ ಬರುತ್ತಿರಲಿಲ್ಲ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top