ಪುತ್ತೂರು : ಅಟೋ ರಿಕ್ಷಾದಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದ ಮೂವರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ ಘಟನೆ ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ ವೃತ್ತದ ಬಳಿ ನಡೆದಿದೆ.
ಬಂಟ್ವಾಳ ತಾಲೂಕು ಕೆದಿಲ ಗ್ರಾಮ ನಿವಾಸಿ ಮೊಹಮ್ಮದ್ ನಾಸೀರ್ (21), ಬಂಟ್ವಾಳ ತಾಲೂಕು ಪೆರಾಜೆ ಗ್ರಾಮದ ಏನಾಜೆ ಬುಡೋಳಿ ನಿವಾಸಿ ಮಹಮ್ಮದ್ ಆಸೀಫ್.ಬಿ(21) ಹಾಗೂ ಸಿನಾನ್ ಬಂಧಿತ ಆರೋಪಿಗಳು.
ನೆಕ್ಕಿಲಾಡಿ ಜಂಕ್ಷನ್ ಬಳಿ ಉಪ್ಪಿನಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಅವಿನಾಶ್ ಹೆಚ್ ಮತ್ತು ಸಿಬ್ಬಂದಿಗಳು ವಾಹನ ತಪಾಸಣೆ ನಡೆಸುತ್ತಿದ್ದಾಗ ಕೆಎ-21-ಸಿ-3003 ನೇ ನೋಂದಣಿ ಸಂಖ್ಯೆಯ ಆಟೋರಿಕ್ಷಾವನ್ನು ತಪಾಸಣೆಗಾಗಿ ನಿಲ್ಲಿಸಲು ಸೂಚಿಸಿದ್ದಾರೆ.
ಆದರೆ ಆಟೋ ರಿಕ್ಷಾ ಚಾಲಕ ನಿಲ್ಲಿಸದೇ ಮುಂದಕ್ಕೆ ಚಲಾಯಿಸಿ, ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಚಾಲಕ ಮತ್ತು ಹಿಂದಿನ ಸೀಟಿನಲ್ಲಿದ್ದ ವ್ಯಕ್ತಿಯು ವಾಹನದಿಂದ ಇಳಿದು ಓಡಲು ಪ್ರಯತ್ನಿಸಿದ್ದಾರೆ. ಪೊಲೀಸರು ಆಪಾದಿತರನ್ನು ಹಿಡಿದು ವಿಚಾರಿಸಿದಾಗ ಸಮರ್ಪಕವಾದ ಉತ್ತರ ನೀಡದಿರುವ ಹಿನ್ನೆಲೆಯಲ್ಲಿ ವಾಹನದ ದಾಖಲಾತಿಗಳನ್ನು ಹಾಗೂ ವಾಹನವನ್ನು ಪೊಲೀಸರು ತಪಾಸಣೆ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಆಟೋರಿಕ್ಷಾದಲ್ಲಿ ಸುಮಾರು 18,720 ರೂ ಮೌಲ್ಯದ 9.36 ಗ್ರಾಂ ನಿಷೇದಿತ ಎಂ.ಡಿ.ಎಂ.ಎ ಮಾದಕ ವಸ್ತು ಮತ್ತು 15 ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಕವರ್ ಗಳು ಪತ್ತೆಯಾಗಿದೆ.