ಪುತ್ತೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಪುತ್ತೂರಿನ ಬಾಲವನದಲ್ಲಿ ನಡೆದ ಜಿಲ್ಲಾಮಟ್ಟದ ಈಜು ಸ್ಪರ್ಧೆಯಲ್ಲಿ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ವಿದ್ಯಾಥಿಗಳು ಚಿನ್ನ, ಬೆಳ್ಳಿ ಸೇರಿ 9 ಪದಕಗಳನ್ನು ಪಡೆದುಕೊಂಡು ಆ.20 ರಿಂದ ಸೆ.8 ರ ತನಕ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಲೈಫ್ ಸೇವಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ವಿದ್ಯಾಲಯದ ಪ್ರಥಮ ಪಿಯು ವಾಣಿಜ್ಯ ಶಾಸ್ತ್ರದ ವಿದ್ಯಾರ್ಥಿನಿ ಪ್ರತೀಕ್ಷಾ ಎನ್. ಶೆಣೈ 50 ಮೀ., 100 ಮೀ. ಮತ್ತು 200 ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಪ್ರಥಮ ಸ್ಥಾನ ಪಡೆದು ಮೂರು ಚಿನ್ನದ ಪದಕ ಪಡೆದುಕೊಂಡಿದ್ದಾರೆ. ದ್ವಿತೀಯ ಪಿಯು ವಿಜ್ಞಾನ ವಿದ್ಯಾರ್ಥಿ ಅನಿಕೇತ್ 200 ಮೀ. ವೈಯಕ್ತಿಕ ಮಿಡ್ಲೇ, 100 ಮೀ.. ಬ್ಯಾಕ್ ಸ್ಟ್ರೋಕ್, 200 ಮೀ. ಬ್ಯಾಕ್ ಸ್ಟ್ರೋಕ್ ನಲ್ಲಿ ಸ್ಪರ್ಧಿಸಿ ಮೂರರಲ್ಲೂ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ. ದ್ವಿತೀಯ ಪಿಯು ವಿದ್ಯಾರ್ಥಿ ಧನ್ವಿತ್ 50 ಮೀ. ಫ್ರೀ ಸ್ಟೈಲ್, 100 ಮೀ. ಫ್ರೀ ಸ್ಟೈಲ್, 200 ಮೀ. ಫ್ರೀ ಸ್ಟೈಲಿನಲ್ಲಿ ತೃತೀಯ ಸ್ಥಾನಿಯಾಗಿ ಮೂರು ಕಂಚಿನ ಪದಕಗಳನ್ನು ಪಡೆದಿದ್ದಾರೆ.
ಪ್ರಸ್ತುತ ಇವರು ಪುತ್ತೂರಿನ ಬಾಲವನ ಈಜುಕೊಳದ ತರಬೇತುದಾರರಾದ ಪಾರ್ಥ ವಾರಣಾಸಿ, ರೋಹಿತ್ ಪಿ. ಹಾಗೂ ದೀಕ್ಷಿತ್ ಅವರ ಮಾರ್ಗದರ್ಶನದಲ್ಲಿ ತರಬೇತು ಪಡೆಯುತ್ತಿದ್ದಾರೆ.