ಕ್ರೋಧಿ ನಾಮ ಸಂವತ್ಸರದ 2024ನೇ ವರ್ಷ ಜಲಕಂಟಕ ಜಗದ್ವ್ಯಾಪಿ ಆಗಲಿದೆ ಎಂದು ಕೋಡಿ ಶ್ರೀಗಳು ಹೇಳಿದ್ದು ಆಗಾಗ ನೆನಪಾಗುತ್ತಿದೆ. ನಮ್ಮ ಸುತ್ತುಮುತ್ತಲ ಪ್ರದೇಶಗಳಲ್ಲಿ ಸಂಭವಿಸುತ್ತಿರುವ ಜಲ ಸಂಬಂಧಿ ದುರಂತಗಳು ತೀವ್ರ ಆತಂಕ ತಂದೊಡ್ಡುತ್ತಿದೆ. ಈ ಮಧ್ಯೆ ಪ್ರಳಯ ಪೀಡಿತರಿಗೆ ಆಶಾಕಿರಣವಾಗಿರುವುದು ಮತ್ತು ತಂಡಗಳು. ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ಇವರೇ ಒಳನಾಡಿನ ಆರ್ಮಿ!
ಇವರ ಪಂಚ ಲಕ್ಷಣಗಳು
ಈ ತಂಡಗಳು ಐದು ನೆಲೆಗಳಲ್ಲಿ ಕಾರ್ಯಾಚರಿಸುತ್ತವೆ.
1) ತಡೆಯುವಿಕೆ
ಪ್ರಾಣಹಾನಿಯಂತಹ ದುರಂತಗಳು ಆಗದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕೆ ನೀಡಿ ಜನ-ಜಾನುವಾರುಗಳನ್ನು ತೆರವು ಗೊಳಿಸುವುದು.
2) ಕಡಿತಗೊಳಿಸುವಿಕೆ
ದುರಂತಗಳು ಸಂಭವಿಸಿದಾಗ ದೊಡ್ಡ ದೊಡ್ಡ ಬಂಡೆಗಳು, ಮರಗಳು, ಕಂಬಗಳು ಬೀಳದಂತೆ, ನೆರೆಯಲ್ಲಿ ಕೊಚ್ಚಿ ಹೋಗದಂತೆ, ಬೆಂಕಿ ಹರಡದಂತೆ ಎಚ್ಚರ ವಹಿಸುವುದು
3) ಸನ್ನದ್ಧತೆ
ನಾವು, ಜನಸಾಮಾನ್ಯರು, ವಿಕೋಪಗಳು ನಡೆದಾಗ ಮಾತ್ರವೇ ಎಚ್ಚರಾಗುವವರಾದರೆ ಈ NDRF ಜೀವರಕ್ಷಕ ಪಡೆ ವರ್ಷದ 365 ದಿನಗಳೂ ಸನ್ನದ್ಧ ಸ್ಥಿತಿಯಲ್ಲೇ ಇರುತ್ತಾರೆ, ತರಬೇತಿ, ತಯಾರಿಗಳಲ್ಲಿ ನಿರತರಾಗಿರುತ್ತಾರೆ.
4) ಸ್ಪಂದನೆ
24 x 7 x 365 ಎಂಬಂತೆ ಸದಾ ಲಭ್ಯವಿರುವ ಇವರು ಅತಿ ಶೀಘ್ರವಾಗಿ ಸ್ಪಂದಿಸಿ ಅಗತ್ಯ ಸ್ಥಳಗಳಲ್ಲಿ ಹಾಜರಾಗುತ್ತಾರೆ.
5) ಮರುಗಳಿಸುವಿಕೆ ಅತಿ ಮುಖ್ಯವಾದುದು ಎಂದರೆ ಕಳೆದು ಹೋದ ಸ್ವತ್ತು, ಸೌಕರ್ಯಗಳನ್ನು ಮರುಸ್ಥಾಪಿಸುವುದು. ಮುರಿದ ಸೇತುವೆ, ಕಂಬಗಳನ್ನು ಸ್ಥಾಪಿಸುವುದು, ಕುಸಿದ ಮನೆಯನ್ನು ಶೀಘ್ರ ಕಟ್ಟುವುದು ಇತ್ಯಾದಿ.
NDRF ತಂಡವು ಪ್ರಾಕೃತಿಕ ವಿಕೋಪ ಸಮಯದಲ್ಲಿ ಈ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಯಾವುದಾದರೂ ಭಾರೀ ದೊಡ್ಡ ಮಟ್ಟಿನ ಪ್ರಾಕೃತಿಕ ವಿಕೋಪಗಳು ನಡೆದಾಗ ಇವರ ತಂಡ ಅತಿ ಶೀಘ್ರವಾಗಿ ಅಲ್ಲಿಗೆ ಭೇಟಿ ನೀಡುತ್ತದೆ. ಅಲ್ಲಿನ ಪರಿಸ್ಥಿತಿ ಅವಲೋಕಿಸುತ್ತಲೇ ಯಾರು ಹೇಗೆ ಕಾರ್ಯನಿರ್ವಹಿಸಬೇಕು ಅನ್ನೋದನ್ನ ತಕ್ಷಣ ನಿರ್ಧರಿಸುತ್ತದೆ.
ಸಾಮಾನ್ಯವಾಗಿ ನೆರೆ ಸಮಯದಲ್ಲಿ 40 ಜನರು ತೆರಳುವುದಕ್ಕೆ ಬೇಕಾಗುವ ಮೆಕಾನಿಕಲ್ ಬೋಟುಗಳನ್ನು ಸಿದ್ಧವಿಟ್ಟುಕೊಂಡು, 5 ರಿಂದ 6 ಜನರ ತಂಡ ಕಾರ್ಯಾಚರಣೆಗೆ ಇಳಿಯುತ್ತದೆ.
ಕಾರ್ಯಾಚರಣೆ ಸಮಯದಲ್ಲಿ ಅವರ ಸಿದ್ಧತೆ ಹೀಗಿರುತ್ತದೆ.
ಈ ತಂಡದ ಸದಸ್ಯರು ಒಮ್ಮೆ ಕಾರ್ಯಾಚರಣೆಗೆ ಇಳಿದರೆ ಹಿಂದೆ ಮುಂದೆ ನೋಡಲಾರರು. ಈ ಸಮಯದಲ್ಲಿ ಬೇಕಾದ ತಿಂಡಿ ಪೊಟ್ಟಣ, ಗ್ಲೂಕೋಸ್ ಗಳನ್ನು ಇವರು ಕೊಂಡೊಯ್ಯುತ್ತಾರೆ. ಜೊತೆಗೆ ಕಾರ್ಯಚರಣೆಗೆ ಬರುವ ಪಡೆಯಲ್ಲಿ ಅರ್ಧದಷ್ಟು ಜನ ಮಾತ್ರ ಮೊದಲ ಕಾರ್ಯಾಚರಣೆ ನಡೆಸಿದರೆ, ನಂತರ ಇನ್ನೊಂದು ತಂಡ ಕಾರ್ಯಾಚರಣೆಗೆ ಇಳಿಯುತ್ತದೆ.