ಮಂಗಳೂರು: ಮಂಗಳೂರಿನ ಹೋಂಸ್ಟೇ ಪ್ರಕರಣ ಕುರಿತು ವಿಚಾರಣೆ ಇಂದು ಮಂಗಳೂರಿನ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಲಿದ್ದು, ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆಯಿದೆ.
2012ರ ಜುಲೈ 28 ರಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಪಡೀಲ್ ಹೋಂ ಸ್ಟೇಗೆ ದಾಳಿ ಮಾಡಿ ಅಲ್ಲಿ ಬರ್ತ್ ಡೇ ಪಾರ್ಟಿಯಲ್ಲಿ ನಿರತರಾಗಿದ್ದವರ ಮೇಲೆ ಹಲ್ಲೆ ನಡೆಸಿದ್ದರು. ಈ ಪ್ರಕರಣದ ವಿಚಾರಣೆ ಇಂದು ನಡೆಯಲಿದೆ.
ಯುವಕ ಯುವತಿಯರು ಹೋಂಸ್ಟೇ ಯಲ್ಲಿ ತಂಗಿದ್ದು, ಬರ್ತ್ ಡೇ ಪಾರ್ಟಿಯಲ್ಲಿ ನಿರತರಾಗಿದ್ದವರ ಮೇಲೆ ಹಿಂದೂ ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿ ತೀವ್ರ ಹಲ್ಲೆ ನಡೆಸಿದ್ದರು. ಈ ಬಗ್ಗೆ ಸಂತ್ರಸ್ತರು ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಾರ್ಟಿ ನಿರತ ಯುವತಿಯರಲ್ಲಿ ಇಬ್ಬರು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಪುತ್ರಿಯರೂ ಇದ್ದರು.
ಅಂತಿಮವಾಗಿ ಪೊಲೀಸರು 44 ಮಂದಿಯ ಮೇಲೆ ಆರೋಪ ಪಟ್ಟಿ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ದಾಳಿ ಘಟನೆ ಚಿತ್ರೀಕರಿಸಲು ತೆರಳಿದ್ದ ಇಬ್ಬರ ಪೊಲೀಸರಿಗೆ ಮಾಹಿತಿ ನೀಡಲಿಲ್ಲ ಅನ್ನೋ ಕಾರಣಕ್ಕಾಗಿ ಆರೋಪ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಘಟನೆ ನಡೆದು ಸುದೀರ್ಘ 12 ವರ್ಷಗಳ ಬಳಿಕ ಇಂದು ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆ ಇದೆ.