ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ವಕ್ಫ್ ಕಾಯಿದೆ 1995ಕ್ಕೆ ತಿದ್ದುಪಡಿ ತಂದು, ಸಂಸತ್ತಿನಲ್ಲಿ ಮಂಡಿಸಲು ಸನ್ನದ್ಧವಾಗಿದೆ.
ಭೂಮಿಯ ಹಕ್ಕು ಪಡೆಯಲು ವಕ್ಫ್ ಮಂಡಳಿಗಳ ಅಧಿಕಾರವನ್ನು ಸೀಮಿತಗೊಳಿಸುವುದು, ಮಂಡಳಿಯ ಸಂಯೋಜನೆಗಳನ್ನು ಪುನರ್ರಚಿಸುವುದು ಮತ್ತು ಸರಿಯಾದ ಪರಿಶೀಲನಾ ಪ್ರಕ್ರಿಯೆಗಳನ್ನು ಖಚಿತಪಡಿಸಿಕೊಳ್ಳುವುದು ಸೇರಿ ಕಾಯಿದೆಗೆ ಸಂಬಂಧಿಸಿದಂತೆ ಸೆಕ್ಷನ್ 40ಕ್ಕೆ ಬದಲಾವಣೆಗಳನ್ನು ಪ್ರಸ್ತಾಪಿಸಿದೆ. ವಿವಾದಿತ ಭೂಮಿ ಹಕ್ಕುಗಳಂತಹ ಸಮಸ್ಯೆಗಳನ್ನು ಪರಿಹರಿಸುವುದು, ವಕ್ಫ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯವನ್ನು ಒದಗಿಸುವುದು, ವಕ್ಫ್ ಆಸ್ತಿಗಳ ದುರ್ಬಳಕೆ ತಡೆಯೋದು ಕೇಂದ್ರ ಸರ್ಕಾರದ ಹೊಸ ಕಾನೂನಿನ ಉದ್ದೇಶವಾಗಿದೆ.
1995ರಲ್ಲಿ ಜಾರಿಗೆ ಬಂದ ವಕ್ಫ್ ಕಾಯಿದೆಯಲ್ಲಿ, ವಕ್ಫ್ ಎನ್ನುವುದು ಮಸೀದಿ, ದರ್ಗಾ, ಸ್ಮಶಾನಗಳು, ಆಶ್ರಯ ಮನೆಗಳು, ಶಿಕ್ಷಣ ಸಂಸ್ಥೆಗಳು ಮುಂತಾದ ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ದೇವರ ಹೆಸರಿನಲ್ಲಿ ಸಮರ್ಪಿಸಲಾದ ಆಸ್ತಿಗಳಾಗಿವೆ.. ಕಾನೂನಿನ ಅನ್ವಯ ಯಾವುದೇ ವ್ಯಕ್ತಿ ಧಾರ್ಮಿಕ ಕಾರಣಕ್ಕಾಗಿ ವಕ್ಫ್ ಮಂಡಳಿಗೆ ದಾನ ಮಾಡಿದ ಆಸ್ತಿ ವಕ್ಫ್ ಆಸ್ತಿಯಾಗಿ, ವಕ್ಫ್ ಮಂಡಳಿಯ ಸ್ವಾಧೀನಕ್ಕೆ ಬರುತ್ತದೆ. ಅಷ್ಟೇ ಅಲ್ಲದೇ ಯಾವುದೇ ಆಸ್ತಿಯನ್ನು ತನ್ನದು ಎಂದು ಘೋಷಿಸಿ ವಶಕ್ಕೆ ಪಡೆಯುವ ಸರ್ವೋಚ್ಛ ಅಧಿಕಾರವನ್ನು ವಕ್ಫ್ ಮಂಡಳಿ ಹೊಂದಿದೆ. ಮನಮೋಹನ್ ಸಿಂಗ್ ಸರ್ಕಾರ 2013ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತಂದು ಇಂತಹ ಸೌಲಭ್ಯವನ್ನು ವಕ್ಫ್ ಮಂಡಳಿಗೆ ಒದಗಿಸಿತ್ತು. ಆ ವಿಶೇಷ ಸೌಲಭ್ಯವೇ ಈಗ ವಿವಾದವಾಗಿರುವುದು.
ವಕ್ಫ್ ಮಂಡಳಿಯು ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಹಿಡಿದಿಟ್ಟುಕೊಳ್ಳಲು ಮತ್ತು ಅಂತಹ ಯಾವುದೇ ಆಸ್ತಿಯನ್ನು ವರ್ಗಾಯಿಸಲು ಅಧಿಕಾರವನ್ನು ಹೊಂದಿರುತ್ತದೆ. ಪ್ರಸ್ತುತ ಕಾನೂನಿನ ಅಡಿಯಲ್ಲಿ, ಭಾರತದಲ್ಲಿನ ಪ್ರತಿ ರಾಜ್ಯವು ಅಧ್ಯಕ್ಷರ ನೇತೃತ್ವದ ವಕ್ಫ್ ಮಂಡಳಿಯನ್ನು ಹೊಂದಿದೆ. ರಾಜ್ಯ ಸರ್ಕಾರದಿಂದ ಒಬ್ಬರು ಅಥವಾ ಇಬ್ಬರು ನಾಮನಿರ್ದೇಶಿತರು, ಮುಸ್ಲಿಂ ಶಾಸಕರು ಮತ್ತು ಸಂಸದರು, ರಾಜ್ಯ ಬಾರ್ ಕೌನ್ಸಿಲ್‌ನ ಮುಸ್ಲಿಂ ಸದಸ್ಯರು, ಮಾನ್ಯತೆ ಪಡೆದ ಇಸ್ಲಾಮಿಕ್ ಧರ್ಮಶಾಸ್ತ್ರದ ವಿದ್ವಾಂಸರು ಇದರಲ್ಲಿ ಇರುತ್ತಾರೆ. ಕಾನೂನು ವಕ್ಫ್ ಬೋರ್ಡ್‌ಗಳಿಗೆ ಆಸ್ತಿಯನ್ನು ನಿರ್ವಹಿಸುವ ಅಧಿಕಾರವನ್ನು ವಹಿಸುತ್ತದೆ ಮತ್ತು ಕಳೆದುಹೋದ ಆಸ್ತಿಗಳ ಮರುಪಡೆಯುವಿಕೆಗೆ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಮಾರಾಟ, ಉಡುಗೊರೆ, ಅಡಮಾನ, ವಿನಿಮಯ ಅಥವಾ ಗುತ್ತಿಗೆಯ ಮೂಲಕ ವಕ್ಫ್‌ನ ಯಾವುದೇ ಸ್ಥಿರ ಆಸ್ತಿಯ ವರ್ಗಾವಣೆಯನ್ನು ಮಂಜೂರು ಮಾಡುತ್ತದೆ.
ಪ್ರಸ್ತುತ, ಭಾರತದಲ್ಲಿ ವಕ್ಫ್ ಮಂಡಳಿಗಳ ನಿಯಂತ್ರಣದಲ್ಲಿ 9.4 ಲಕ್ಷ ಎಕರೆ ಪ್ರದೇಶದಲ್ಲಿ 8.7 ಲಕ್ಷ ಆಸ್ತಿಗಳಿವೆ.
ವಕ್ಫ್ ಕಾಯ್ದೆ 1995ರ ಸೆಕ್ಷನ್ 40 ರ ಪ್ರಕಾರ (2013 ರಲ್ಲಿ ತಿದ್ದುಪಡಿ ಮಾಡಿದಂತೆ) ನಿರ್ದಿಷ್ಟ ಆಸ್ತಿಯು ವಕ್ಫ್ ಆಸ್ತಿಯೇ ಅಥವಾ ಇಲ್ಲವೇ ಅಥವಾ ವಕ್ಫ್ ಸುನ್ನಿ ಅಥವಾ ವಕ್ಫ್ ಶಿಯಾ ಎಂದು ಉದ್ಭವಿಸುವ ಯಾವುದೇ ಪ್ರಶ್ನೆಯನ್ನು ನಿರ್ಧರಿಸಲು ರಾಜ್ಯ ವಕ್ಫ್ ಮಂಡಳಿಗೆ ಅಧಿಕಾರವಿದೆ. ವಕ್ಫ್ ಮಂಡಳಿಯು, ನೋಟಿಸ್‌ನ ಅನುಸಾರವಾಗಿ ತೋರಿಸಬಹುದಾದಂತಹ ಕಾರಣವನ್ನು ಸರಿಯಾಗಿ ಪರಿಗಣಿಸಿದ ನಂತರ ಮತ್ತು ಅದು ಸೂಕ್ತವೆಂದು ಪರಿಗಣಿಸಬಹುದಾದ ವಿಚಾರಣೆಯನ್ನು ಮಾಡಿದ ನಂತರ, ಪ್ರಕರಣವನ್ನು ನಿರ್ಧರಿಸುತ್ತದೆ.
ವಕ್ಫ್ ಮಂಡಳಿಯ ಅಧಿಕಾರಗಳ ವಿರುದ್ಧ ಪಿಐಎಲ್
ವಕ್ಫ್ ಬೋರ್ಡ್‌ಗೆ ಯಾವುದೇ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಇರುವ ಅನಿಯಮಿತ ಅಧಿಕಾರ ನೀಡುವುದೇ ಸೆಕ್ಷನ್ 40. ಅದಕ್ಕೆ ವಿರೋಧ ಬಂದಿರುವುದು ವಿವಾದಕ್ಕೆ ಕಾರಣವಾಗಿದೆ.
2023ರಲ್ಲಿ, ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ವಕ್ಫ್ ಕಾಯಿದೆ 1995ರ ನಿಬಂಧನೆಗಳ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ಹಿಂದೂ ಧರ್ಮ, ಕ್ರಿಶ್ಚಿಯನ್ ಧರ್ಮ ಬೌದ್ಧ ಧರ್ಮ, ಜೈನ ಧರ್ಮ, ಸಿಖ್ ಧರ್ಮ, ಜೂಡಾಯಿಸಂ, ಬಹಾಯಿಸಂ ಮತ್ತು ಝೋರಾಸ್ಟ್ರಿಯನ್ ಅನುಯಾಯಿಗಳಿಗೆ ಇಲ್ಲಿ ಯಾವುದೇ ರೀತಿಯ ಕಾನೂನುಗಳಿಲ್ಲ. ಹಾಗಾಗಿ ಇದು ಭಾರತದ ಜಾತ್ಯತೀತತೆ, ಏಕತೆ ಮತ್ತು ಸಮಗ್ರತೆಗೆ ವಿರುದ್ಧವಾಗಿದೆ ಎಂದು ಧ್ವನಿ ಎತ್ತಿದ್ದರು. ಟ್ರಸ್ಟ್-ಟ್ರಸ್ಟಿಗಳು, ದತ್ತಿಗಳು- ದತ್ತಿ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿಗಳಿಗೆ ಏಕರೂಪದ ಕೋಡ್ ಅನ್ನು ತರಲು ಅವರು ನ್ಯಾಯಾಲಯದಿಂದ ಕೇಂದ್ರಕ್ಕೆ ನಿರ್ದೇಶನವನ್ನು ಕೋರಿ, ಕಾಯ್ದೆಯ ಕೆಲವು ನಿಬಂಧನೆಯ ಸಿಂಧುತ್ವವನ್ನು ಪ್ರಶ್ನಿಸಿದ್ದರು.
ಏಪ್ರಿಲ್ 2023ರಲ್ಲಿ ಸುಪ್ರೀಂ ಕೋರ್ಟ್, ಉಪಾಧ್ಯಾಯರ PIL ಅನ್ನು ವಜಾಗೊಳಿಸಿತ್ತು. ವಕ್ಫ್ ಕಾಯ್ದೆಯ ಕಾರಣದಿಂದಾಗಿ ಉಪಾಧ್ಯಾಯ ಅವರು ತಮ್ಮ ಹಕ್ಕುಗಳ ಯಾವುದೇ ಉಲ್ಲಂಘನೆಯನ್ನು ತೋರಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಪಿಐಎಲ್ ಅನ್ನು ರದ್ದುಗೊಳಿಸಿತ್ತು.
ಬಡ ಮುಸ್ಲಿಮರು ಮತ್ತು ಮಹಿಳೆಯರಿಗೆ ನ್ಯಾಯ ಒದಗಿಸುವುದೇ ವಕ್ಫ್ ಕಾಯ್ದೆಗೆ ಮಾಡಬಯಸಿರುವ ತಿದ್ದುಪಡಿಯ ಉದ್ದೇಶವೆಂದು ಸರ್ಕಾರಿ ಮೂಲಗಳು ಹೇಳಿವೆ.