ಬರೋಬ್ಬರಿ 52 ವರ್ಷಗಳ ಬಳಿಕ ಪ್ಯಾರಿಸ್ ಒಲಿಂಪಿಕ್ಸ್ 2024ರ ಪುರುಷರ ಹಾಕಿ ಪೂಲ್ ಬಿ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 3-2 ಗೋಲುಗಳಿಂದ ಸೋಲಿಸುವ ಮೂಲಕ ಭಾರತದ ಹಾಕಿ ತಂಡವು ಐತಿಹಾಸಿಕ ಸಾಧನೆ ಮಾಡಿದೆ.
1972ರ ಒಲಿಂಪಿಕ್ಸ್ ನಂತರ ಭಾರತವು ಹಾಕಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದ್ದು ಇದೇ ಮೊದಲು. ಕಳೆದ ಬಾರಿ ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡವು ರಜತ ಪದಕ ಜಯಿಸಿತ್ತು.
ಭಾರತ ಪರ ಅಭಿಷೇಕ್ ಮತ್ತು ಹರ್ಮನ್‌ಪ್ರೀತ್ ಸಿಂಗ್ (2) ಗೋಲು ಗಳಿಸಿದರು. ಥಾಮಸ್ ಕ್ರೇಗ್ ಮತ್ತು ಬೇಕ್ ಗೋವರ್ಸ್ ಆಸ್ಟ್ರೇಲಿಯಾ ಪರ ಗೋಲು ಗಳಿಸಿದರು. ಈ ಗೆಲುವಿನೊಂದಿಗೆ ಭಾರತ (10 ಅಂಕಗಳು, 5 ಪಂದ್ಯಗಳು) ಪೂಲ್ ಬಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ.
ಪೂಲ್‌ನಲ್ಲಿ ಬೆಲ್ಲಿಯಂ ಮುನ್ನಡೆ ಸಾಧಿಸಿದರೆ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ. ಭಾರತವು ನ್ಯೂಜಿಲೆಂಡ್ ವಿರುದ್ದ ಜಯದೊಂದಿಗೆ ಓಟ ಆರಂಭಿಸಿತು. ಅರ್ಜೆಂಟೀನಾ ವಿರುದ್ಧದ ಪಂದ್ಯ ಡ್ರಾ ಆಯಿತು. ಐರ್ಲೆಂಡ್ ತಂಡದ ವಿರುದ್ಧ ಭಾರತ ಗೆಲುವು ದಾಖಲಿಸಿದೆ.
ಈ ವರ್ಷ ಆಡಿದ ಎಲ್ಲಾ ಏಳೂ ಪಂದ್ಯಗಳಲ್ಲಿ ಗೆದ್ದಿದ್ದ ಆಸ್ಟ್ರೇಲಿಯಾ, ಒಲಿಂಪಿಕ್ಸ್ ಕಣದಲ್ಲ ಸೋಲು ಕಂಡಿದೆ. ಇನ್ನೊಂದೆಡೆ ಭಾರತ ತಂಡ ಹಾಲಿ ಒಲಿಂಪಿಕ್ ಚಾಂಪಿಯನ್ ಬೆಲ್ಡಿಯಂ ವಿರುದ್ಧ ಕಳೆದ ಪಂದ್ಯದಲ್ಲಿ ಎದುರಾದ ಸೋಲಿನಿಂದ ಚೇತರಿಕೆ ಕಾಣುವ ಪ್ರಯತ್ನದಲ್ಲಿ ಯಶಸ್ವಿಯಾಯಿತು.