ಕಾವು: ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಮತ್ತು ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಕಾರದೊಂದಿಗೆ ನವೋದಯ ಒಕ್ಕೂಟದ ವತಿಯಿಂದ ಮಕ್ಕಳಿಗೆ ಪುಸ್ತಕ ವಿತರಣೆ, ಪ್ರೋತ್ಸಾಹಧನ, ಹಾಗೂ ನವೋದಯ ಗುಂಪುಗಳಿಗೆ ಲಾಭಾಂಶ ವಿತರಣಾ ಕಾರ್ಯಕ್ರಮ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶಿವಸದನ ಸಭಾಂಗಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ನಿಯಮ ನಿಭಂದನೆಗಳನ್ನು ಸರಿಯಾಗಿ ಪಾಲಿಸಿದಲ್ಲಿ ಅನೇಕ ಸೌಲಭ್ಯಗಳ ಜೊತೆಗೆ ಲಾಭಾಂಶವನ್ನು ಪಡೆಯಲು ಸಾಧ್ಯ ಎಂದರು
ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್. ಬಿ. ಜಯರಾಮ ರೈ ಬಳಜ್ಜ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ. ಸಾಮಾಜಿಕವಾಗಿ ಬಲಿಷ್ಠವಾದಾಗ ದೇಶದ ಅಭಿವೃದ್ಧಿ ಸಾಧ್ಯ ಅದಕ್ಕಾಗಿ ಸನ್ಮಾನ್ಯ ರಾಜೇಂದ್ರ ಕುಮಾರ್ ರವರು ನವೋದಯ ಟ್ರಸ್ಟ್ ಮುಖಾಂತರ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ ಎಂದರು.
ಮಕ್ಕಳಿಗೆ ಪುಸ್ತಕ ಮತ್ತು ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಕೊಡುಕೊಳ್ಳುವಿಕೆಯಂತ ಮನೋಭಾವನೆ ನಮ್ಮಲ್ಲಿದ್ದರೆ ಕಷ್ಟ ಕಾಲದಲ್ಲಿ ನಮ್ಮ ನೆರವಿಗೆ ಬರುತ್ತಾರೆ. ಅದಕ್ಕಾಗಿ ಈ ಒಕ್ಕೂಟದಂತಹ ಸಂಘಗಳಲ್ಲಿ ತೊಡಗಿಸಿಕೊಳ್ಳಿ. ಕಳೆದ ಹಲವಾರು ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಕಾವು ಒಕ್ಕೂಟವು ನಡೆಸುತ್ತಿರುವ ಅನೇಕ ಸಾಮಾಜಿಕ ಕೆಲಸಗಳಿಂದ ಜಿಲ್ಲೆಯಲ್ಲಿಯೇ ಹೆಸರು ಗಳಿಸಿದೆ ಎಂದರು.
ಮುಖ್ಯ ಅತಿಥಿಗಳಾಗಿ ಮಾಡ್ನೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಚಂದ್ರಶೇಖರ ರಾವ್ ನಿಧಿಮುಂಡ, ಸಿ.ಎ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಕೇಶವ ಮೂರ್ತಿ ಮಾತನಾಡಿದರು.
ವೇದಿಕೆಯಲ್ಲಿ ನವೋದಯ ಟ್ರಸ್ಟ್ ನ ಮೇಲ್ವಿಚಾರಕ ಚಂದ್ರಶೇಖರ್, ನವೋದಯ ಒಕ್ಕೂಟದ ಅಧ್ಯಕ್ಷ ಸುಬ್ರಾಯಗೌಡ, ಗೌರವಾಧ್ಯಕ್ಷ ಅಮ್ಮು ಪೂಂಜಾ ಉಪಸ್ಥಿತರಿದ್ದರು.
ಒಟ್ಟು 127 ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು. ಪ್ರತಿಭಾನ್ವಿತ 5 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಆಯ್ದ ಗುಂಪುಗಳಿಗೆ ಒಟ್ಟು 4,12,600 ರೂ. ಲಾಭಾಂಶ ವಿತರಿಸಲಾಯಿತು. ವೈಶಾಲಿ ಗುಂಪು ಮತ್ತು ವೃದ್ಧಿ ಗುಂಪುಗಳನ್ನು ಅತ್ಯುತ್ತಮ ಎಂದು ಗುರುತಿಸಲಾಯಿತು .
ಸವಿತಾ ರೈ ಪ್ರಾರ್ಥಿಸಿದರು. ಸುಬ್ರಾಯ ಗೌಡ ಸ್ವಾಗತಿಸಿದರು. ಒಕ್ಕೂಟದ ಕಾರ್ಯದರ್ಶಿ ನಿರ್ಮಲಾ ರಾವ್, ಪ್ರೇರಕಿ ಮಾಧವಿ ವರದಿ ಮಂಡಿಸಿದರು. ಮೇಲ್ವಿಚಾರಕ ಚಂದ್ರಶೇಖರ್ ವಂದಿಸಿದರು ಚಿದಾನಂದ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.