ಪುತ್ತೂರು: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಇಂದು ವಿಫುಲವಾದ ಅವಕಾಶಗಳಿವೆ. ಆದರೆ ಯಶಸ್ವಿ ಪತ್ರಕರ್ತನಾಗಬೇಕೆಂದರೆ ಪತ್ರಿಕೋದ್ಯಮ ವಿದ್ಯಾರ್ಥಿಗಳು ಇಂದಿನಿಂದಲೇ ಅದಕ್ಕೆ ಪೂರಕವಾದ ತರಬೇತಿ ಹಾಗೂ ತಯಾರಿಯನ್ನು ಮಾಡಿಕೊಳ್ಳಬೇಕಿದೆ. ವಿದ್ಯಾರ್ಥಿ ದೆಸೆಯಲ್ಲಿಯೇ ಸಂವಹನ ಕೌಶಲ್ಯ, ಭಾಷಾ ನಿಪುಣತೆ, ಬರವಣಿಗೆ ಶೈಲಿಯನ್ನು ಉತ್ತಮಪಡಿಸಿಕೊಂಡರೆ ಉತ್ತಮ ಪತ್ರಕರ್ತನಾಗಲು ಸಾಧ್ಯ ಎಂದು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯಾ.ಪಿ.ಆರ್.ನಿಡ್ಪಳ್ಳಿ ಹೇಳಿದರು.
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ,ಪತ್ರಿಕೋದ್ಯಮ ಮತ್ತು ಐಕ್ಯೂಎಸಿ ಘಟಕದ ಸಹಯೋಗದಲ್ಲಿ ನಡೆದ ಈ ಸಾಲಿನ ಶೈಕ್ಷಣಿಕ ವರ್ಷದ ಪ್ರಥಮ ಮಣಿಕರ್ಣಿಕ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಹವ್ಯಾಶ್ರೀ ಪಾಲ್ತಾಡಿ ಮಾತನಾಡಿ, ಒಬ್ಬ ವ್ಯಕ್ತಿ ಸಾಧನೆ ಮಾಡುತ್ತಾನೆ ಎಂದಾಗ ನೂರಾರು ಸಮಸ್ಯೆಗಳು ಅವನನ್ನು ಭಾದಿಸುತ್ತದೆ. ಆದರೆ ವಿದ್ಯಾರ್ಥಿಗಳು ಕಲಿಯುವ ಹಂತದಲ್ಲಿ ಸಮಸ್ಯೆಗಳಿಗೆ ಹೆದರದೆ ಗುರಿ ತಲುಪುವಲ್ಲಿ ಯಶಸ್ವಿಯಾಗಬೇಕು. ಕಲಿಯುವ ಹಂತದಲ್ಲಿ ಎಂದಿಗೂ ಅಹಂಕಾರ ಬೇಡ. ನಮ್ಮ ಸಾಮರ್ಥ್ಯದ ಮೇಲೆ ನಮಗೆ ಭರವಸೆ ಇದ್ದಾಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ ಎಂದರು.
ಪ್ರಥಮ ವರ್ಷದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಪತ್ರಿಕೋದ್ಯಮ ವಿಭಾಗಕ್ಕೆ ನೂತನವಾಗಿ ಸೇರ್ಪಡೆಗೊಂಡ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಲೇಖನಿಯನ್ನು ನೀಡಿ ತೃತೀಯ ವರ್ಷದ ವಿದ್ಯಾರ್ಥಿಗಳು ಶುಭಹಾರೈಸಿದರು.
ತೃತೀಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಲತಾ ಚೆಂಡೆಡ್ಕ ಸ್ವಾಗತಿಸಿ, ಹರ್ಷಿತಾ ಕೆ ವಂದಿಸಿದರು. ಸಂಶೀನಾ ಸೂರ್ಯ ನಿರ್ವಹಿಸಿದರು.