ಸವಣೂರು : ಭಾರೀ ಮಳೆಯಿಂದಗಾಗಿ ಸವಣೂರು-ಬಂಬಿಲ- ಅಂಕತಡ್ಕ ರಸ್ತೆಯ ನಾಡೋಳಿ ಎಂಬಲ್ಲಿ ಧರೆ ಕುಸಿಯುತ್ತಿದ್ದ ಕಾರಣ ಮಳೆ ಕಡಿಮೆಯಾಗುವ ತನಕ ಸಂಚಾರ ನಿರ್ಬಂಧಿಸಬೇಕೆಂಬ ಆಗ್ರಹವೂ ವ್ಯಕ್ತವಾಗಿದೆ.
ನಾಡೋಳಿಯಲ್ಲಿ ನೂತನ ಸೇತುವೆ ನಿರ್ಮಾಣ ಸಮಯದಲ್ಲಿ ರಸ್ತೆ ಅಗಲೀಕರಣ ಹಾಗೂ ಸೇತುವೆಗೆ ಹೊಂದಿಕೊಂಡಂತೆ ರಸ್ತೆ ನಿರ್ಮಾಣ ಸಲುವಾಗಿ ಬೃಹತ್ ಬರೆಯನ್ನು ಅಗೆಯಲಾಗಿದ್ದು,ಈ ರಸ್ತೆಯ ಎರಡೂ ಬದಿಯ ಬರೆ ಈಗ ಮಳೆಗಾಲದಲ್ಲಿ ದಿನೇ ದಿನೇ ಕುಸಿಯುತ್ತಿದೆ.
ಬರೆಯ ಮೇಲೆ ವಿದ್ಯುತ್ ಕಂಬ ಹಾದು ಹೋಗಿದ್ದು, ಅದು ಕೂಡ ಈಗ ಕುಸಿಯುವ ಹಂತಕ್ಕೆ ತಲುಪಿದೆ.ಬರೆ ಕುಸಿತವಾಗಿ ಮಣ್ಣು ತೆರವುಗೊಳಿಸುವ ಕಾರ್ಯವನ್ನು ಮೊಗರೋಡಿ ಕನ್‌ಸ್ಟ್ರಕ್ಷನ್ ಸಂಸ್ಥೆಯಿಂದ ನಡೆಸಲಾಗುತ್ತಿದೆ.ಮಣ್ಣು ತೆರವುಗೊಳಿಸಿದಾಗ ಮತ್ತೆ ಧರೆ ಕುಸಿತವಾಗುತ್ತಿದ್ದು,ಮಳೆ ಕಡಿಮೆಯಾಗುವ ತನಕ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಮಳೆಗಾಲದಲ್ಲಿ ಮಣ್ಣು ತೆರವು ಮಾಡುವಾಗ ರಸ್ತೆಯೂ ಹಾಳಾಗುತ್ತಿದ್ದು ಅಲ್ಲದೆ ಜೆಸಿಬಿ ಯಂತ್ರದ ಶಬ್ದ ಹಾಗೂ ವೈಬ್ರೇಟ್‌ಗೆ ಮತ್ತೆ ಮತ್ತೆ ಬರೆ ಕುಸಿಯುವುದರಿಂದ ಮಳೆ ಮುಗಿಯುವವರೆಗೆ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.