ಉಪ್ಪಿನಂಗಡಿ: ಆವರಣ ಇಲ್ಲದ ಬಾವಿಗೆ ವೃದ್ಧೆಯೊಬ್ಬರು ಬಿದ್ದು ಮೃತಪಟ್ಟ ಘಟನೆ ಉಪ್ಪಿನಂಗಡಿಯ ನೂಜಿ ಎಂಬಲ್ಲಿ ನಡೆದಿದೆ.
ನೂಜಿ ನಿವಾಸಿ ಹೊನ್ನಮ್ಮ (65) ಮೃತಪಟ್ಟವರು.
ಹೊನ್ನಮ್ಮ ಶುಕ್ರವಾರ ಸಂಜೆ ಕಾಣೆಯಾಗಿದ್ದು, ಮನೆಯವರು ಹುಡುಕಾಡಿದಾಗ ಮನೆಯ ಆವರಣ ಗೋಡೆಯಿಲ್ಲದ ಬಾವಿಯ ಬಳಿ ಇವರ ಕೊಡೆ ಪತ್ತೆಯಾಗಿತ್ತು. ಬಾವಿಯಲ್ಲಿ ನೋಡಿದಾಗ ಮೃತದೇಹ ಬಾವಿಯಲ್ಲಿ ತೇಲುತ್ತಿತ್ತು. ಯಾರೂ ಇಲ್ಲದ ಸಂದರ್ಭ ಇವರು ಬಾವಿಗೆ ಇಣುಕಿ ನೋಡಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ರಾತ್ರಿ ಇವರ ಮೃತದೇಹವನ್ನು ಅಡೆಕ್ಕಲ್ ಸಂತು ಹಾಗೂ ಸ್ಥಳೀಯ ಯುವಕರ ತಂಡ ಬಂದು ಮೇಲೆತ್ತಿದ್ದಾರೆ.