ನವದೆಹಲಿ: ಪ್ರಸ್ತುತ ಅಸ್ತಿತ್ವದಲ್ಲಿರುವ ಟೋಲ್ ವ್ಯವಸ್ಥೆಯನ್ನು ರದ್ದುಗೊಳಿಸುವ ನಿರ್ಧಾರವನ್ನು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತೆಗೆದುಕೊಂಡಿದ್ದಾರೆ. ಇದಕ್ಕೆ ಪರ್ಯಾಯವಾಗಿ ಉಪಗ್ರಹ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಘೋಷಿಸಲಾಗಿದೆ.
ಸರಕಾರ ಟೋಲ್ ರದ್ದುಗೊಳಿಸಿ ಶೀಘ್ರದಲ್ಲೇ ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನ ಪ್ರಾರಂಭಿಸಲಾಗುವುದು ಎಂದು ಅವರು ಶುಕ್ರವಾರ ಹೇಳಿದ್ದಾರೆ.
ಟೋಲ್ ಸಂಗ್ರಹವನ್ನ ಹೆಚ್ಚಿಸುವುದು ಮತ್ತು ಟೋಲ್ ಪ್ಲಾಜಾಗಳಲ್ಲಿ ದಟ್ಟಣೆಯನ್ನ ಕಡಿಮೆ ಮಾಡುವುದು ಈ ವ್ಯವಸ್ಥೆಯನ್ನ ಜಾರಿಗೆ ತರುವ ಹಿಂದಿನ ಉದ್ದೇಶವಾಗಿದೆ.
ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ ಅವರು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (GNSS) ಜಾರಿಗೆ ತರಲಿದೆ ಎಂದು ಹೇಳಿದರು. ಇದನ್ನು ಆಯ್ದ ಟೋಲ್ ಪ್ಲಾಜಾಗಳಲ್ಲಿ ಮಾತ್ರ ಮಾಡಲಾಗುತ್ತದೆ.
ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ನಿತಿನ್ ಗಡ್ಕರಿ, ಈಗ ನಾವು ಟೋಲ್ ರದ್ದುಗೊಳಿಸುತ್ತಿದ್ದೇವೆ ಮತ್ತು ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಇರುತ್ತದೆ. ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನ ಕಡಿತಗೊಳಿಸಲಾಗುತ್ತದೆ ಮತ್ತು ನೀವು ಪ್ರಯಾಣಿಸುವ ದೂರಕ್ಕೆ ಅನುಗುಣವಾಗಿ ಶುಲ್ಕ ವಿಧಿಸಲಾಗುತ್ತದೆ. ಇದು ಸಮಯ ಮತ್ತು ಹಣವನ್ನ ಉಳಿಸುತ್ತದೆ. ಈ ಮೊದಲು ಮುಂಬೈನಿಂದ ಪುಣೆಗೆ ಪ್ರಯಾಣಿಸಲು 9 ಗಂಟೆಗಳು ತೆಗೆದುಕೊಳ್ಳುತ್ತಿತ್ತು, ಈಗ ಅದು 2 ಗಂಟೆಗಳಿಗೆ ಇಳಿದಿದೆ ಎಂದಿದ್ದಾರೆ.