ಕನ್ಯಾನ : ದೇಶ ಪ್ರೇಮವೆಂದರೆ ಗಡಿಯಲ್ಲಿ ಶಸ್ತ್ರ ಹಿಡಿದು ಹೋರಾಡುವುದು ಮಾತ್ರ ಅಲ್ಲ. ನಾವು ಮಾಡುವ ಪ್ರತಿಯೊಂದು ಕೆಲಸವನ್ನು ಪ್ರಾಮಾಣಿಕತೆಯನ್ನು ಮಾಡಿದರೆ ಅದು ದೇಶ ಕಟ್ಟುವ ಕೆಲಸ ಎಂದು ನಿವೃತ್ತ ಯೋಧ ರಮೇಶ್ ರಾವ್ ಮಂಚಿ ಹೇಳಿದರು.
ಕೇಂದ್ರ ಸಮಾನ ಇಲಾಖೆ ಮಂಗಳೂರು ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಕನ್ಯಾನ ಇವರ ಜಂಟಿ ಆಶ್ರಯದಲ್ಲಿ ಕನ್ಯಾನ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಕಾರ್ಗಿಲ್ ವಿಜಯ ದಿವಸ ರಜತ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾರ್ಗಿಲ್ ಯುದ್ಧದ ಸಂದರ್ಭದ ಅನುಭವಗಳನ್ನು ಹಂಚಿಕೊಂಡ ಅವರು ದೇಶದ ಜನ ನೆಮ್ಮದಿಯಿಂದ ಇರಲು ವೈಯಕ್ತಿಕವಾಗಿ ತ್ಯಾಗ ಮಾಡಬೇಕಾಗುತ್ತದೆ ಎಂದು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಹುತಾತ್ಮರಾದ ಯೋಧರು ಮತ್ತು ಅವರ ಕುಟುಂಬದ ತ್ಯಾಗ ಮತ್ತು ಬಲಿದಾನವನ್ನು ನೆನಪು ಮಾಡಿಕೊಳ್ಳುವುದು ಹಾಗೂ ಮುಂದಿನ ಜನಾಂಗದಲ್ಲಿ ದೇಶಪ್ರೇಮವನ್ನು ಉದ್ದೀಪಿಸುವುದು ಇಂಥ ಕಾರ್ಯಕ್ರಮಗಳ ಉದ್ದೇಶ ಅಂದರು. ಕ್ಷೇತ್ರ ಪ್ರಚಾರ ಅಧಿಕಾರಿ ಜಿ ತುಕಾರಾಮ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಉಪನ್ಯಾಸಕ ರಾಜೇಂದ್ರ ರಾವ್, ಸ್ವಾಗತಿಸಿದರು. ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಿವೃತ್ತ ಯೋಧ ರಮೇಶ್ ರಾವ್ ಮಂಚಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.