ಸುಳ್ಯ: ದ್ವಿಚಕ್ರ ವಾಹನ ಹಾಗೂ ಸರಕಾರಿ ಬಸ್ ನಡುವೆ ನಡೆದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ಸೋಣಂಗೇರಿ ಸಮೀಪದ ಸುತ್ತುಕೋಟೆಯಲ್ಲಿ ಇಂದು ನಡೆದಿದೆ.
ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಸದಸ್ಯ ರಾಮಚಂದ್ರ ಪ್ರಭು (68) ಮೃತಪಟ್ಟವರು.
ರಾಮಚಂದ್ರ ಪ್ರಭು ಅವರು ತನ್ನ ಸ್ಕೂಟಿಯಲ್ಲಿ ಸುಳ್ಯಕ್ಕೆ ಬರುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನಡುವೆ ಅಪಘಾತವಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ರಾಮಚಂದ್ರ ಪ್ರಭುರವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ರಾಮಚಂದ್ರ ಪ್ರಭು ರವರು ಪುತ್ರನ ವಿವಾಹ ಸಮಾರಂಭದ ಆಮಂತ್ರಣ ಪತ್ರ ವಿತರಣೆ ಕಾರ್ಯ ನಡೆಸಲು ಪತ್ನಿ ಯೊಂದಿಗೆ ಸುಳ್ಯದ ಕಡೆಗೆ ಬರುತ್ತಿದ್ದರು. ದಂಪತಿ ಬರುತ್ತಿದ್ದಾಗ ದಾರಿಮಧ್ಯೆ ಮಳೆ ಬಂದ ಕಾರಣ ಪತ್ನಿಯನ್ನು ಅಲ್ಲಿಯೇ ಇಳಿಸಿ ಬಸ್‌ನಲ್ಲಿ ಬರುವಂತೆ ತಿಳಿಸಿ ರಾಮಚಂದ್ರ ಪ್ರಭು ರವರು ದ್ವಿಚಕ್ರ ವಾಹನದಲ್ಲೇ ಸುಳ್ಯದತ್ತ ಬಂದರು. ಸುತ್ತುಕೋಟೆ ತಿರುವು ತಲುಪುವಷ್ಟರಲ್ಲಿ ಸುಳ್ಯದಿಂದ ಸುಬ್ರಹ್ಮಣ್ಯ ಕಡೆಗೆ ಹೋಗುತ್ತಿದ್ದ ಸರ್ಕಾರಿ ಬಸ್ ಗೆ ಢಿಕ್ಕಿ ಹೊಡೆದಿದ್ದು, ತಲೆಗೆ ಗಂಭೀರವಾಗಿ ಗಾಯಗೊಂಡ ರಾಮಚಂದ್ರ ಪ್ರಭುಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ, ಸುಳ್ಯ ಪೊಲೀಸರು ಸ್ಥಳಕ್ಕೆ ಬಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.