ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರ ಸಭೆ

ಉಪ್ಪಿನಂಗಡಿ : ದೇಹ ಹಾಗೂ ದೇವಸ್ಥಾನಕ್ಕೆ ಅವಿನಾಭವ ಸಂಬಂಧವಿದ್ದು, ಮನ ಶುದ್ದಿ, ಕರ್ಮ ಶುದ್ಧಿ, ಭಾವ ಶುದ್ಧಿ ಭಗವಂತ ಆರಾಧನೆಯಿಂದ ಸಾಧ್ಯವಾಗುತ್ತದೆ. ದೀಪದ ಜ್ಯೋತಿ ನಂದದಂತೆ ಹಾಗೂ ವ್ಯಗ್ರವಾಗದಂತೆ ನಾವು ಹೇಗೆ ನೋಡಿಕೊಳ್ಳುತ್ತೇವೋ ಅದೇ ರೀತಿ ದೇವಸ್ಥಾನಗಳನ್ನು ನಾವು ನೋಡಿಕೊಳ್ಳಬೇಕು. ಎಂದು ಸುಬ್ರಹ್ಮಣ್ಯ ಸಂಪುಟ ಶ್ರೀ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ತಿಳಿಸಿದರು.

ಮುಂಬರುವ ಡಿಸೆಂಬರ್‌ನಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿರುವ ಇಲ್ಲಿನ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜು.21ರಂದು ನಡೆದ ಭಕ್ತರ ಸಭೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಶ್ರೀಗಳು ಆಶೀರ್ವಚನ ನೀಡಿದರು.

ಊರ ದೇವಾಲಯದ ಅಭಿವೃದ್ಧಿಯಿಂದ ಊರಿನ ಸಮಸ್ತರ ಅಭಿವೃದ್ಧಿಯೂ ಆಗುವುದು. ಈ ನಿಟ್ಟಿನಲ್ಲಿ ಭಕ್ತರು ತ್ರಿಕರಣಪೂರ್ವಕ ಶ್ರೀ ದೇವರ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಆದ್ದರಿಂದ ಊರಿನ ದೇವರ ಸನ್ನಿಧಾನಗಳನ್ನು ತುಂಬಿಸುವ ಕೆಲಸಗಳಲ್ಲಿ ಪ್ರತಿಯೋರ್ವರೂ ಪಾಲ್ಗೊಳ್ಳಬೇಕು. ದೇವರು ಸರ್ವವ್ಯಾಪಿ. ಆದರೆ ನಮ್ಮ ಹಿರಿಯರು ದೇವರಿಗೊಂದು ಸನ್ನಿಧಾನ ಮಾಡಿ ಅಲ್ಲಿ ದೇವರನ್ನು ಆರಾಧಿಸುವ ಮೂಲಕ ಸಮಾಜಕ್ಕೆ ಬೆಳಕು ನೀಡುವ ಕೆಲಸ ಮಾಡಿದ್ದಾರೆ. ಇದಕ್ಕೆಲ್ಲಾ ಅವರು ತಮ್ಮ ತಪೋಶಕ್ತಿಯಿಂದ ಶಕ್ತಿಯನ್ನು ತುಂಬಿದ್ದಾರೆ. ಬೆಳಗುವ ದೀಪದ ಎಣ್ಣೆ ಮುಗಿದರೆ ದೀಪ ನಂದಿ ಆ ಪ್ರದೇಶವಿಡೀ ಕತ್ತಲಾವರಿಸುತ್ತದೆ. ಅದೇ ರೀತಿ ದೀಪದ ಜ್ವಾಲೆ ವ್ಯಗ್ರವಾಗಿ ಉರಿದರೆ ಅಲ್ಲಿ ಇನ್ನೊಂದು ಆಪತ್ತಿಗೆ ಕಾರಣವಾಗುತ್ತದೆ. ದೇವಾಲಯಗಳು ಕೂಡಾ ಹೀಗೆನೇ. ಭಕ್ತಿಯ ಮೂಲಕ ಇದನ್ನು ಸಮಚಿತ್ತದಿಂದ ಇಡಬೇಕು. ಕಾಲಕಾಲಕ್ಕೆ ತಕ್ಕ ಪೂಜೆ-ಪುನಸ್ಕಾರಗಳನ್ನು ನಡೆಸಬೇಕು. ಆಗ ಅಲ್ಲಿ ದೇವರ ಸಾನಿಧ್ಯ ಪ್ರಜ್ವಲಿಸಲು ಸಾಧ್ಯ ಎಂದರು.































 
 

ಶಾಸಕ, ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಸಲಹೆಗಾರರಾದ ಅಶೋಕ್ ಕುಮಾ‌ರ್ ರೈ ಕೋಡಿಂಬಾಡಿ ಮಾತನಾಡಿ, ದೇವಾಲಯಗಳಲ್ಲಿ ದೇವರು ಮತ್ತು ಭಕ್ತರ ನಡುವೆ ನಂಟು ಬೆಸೆಯುವ ಕಾರ್ಯ ನಡೆಯಬೇಕು. ಬ್ರಹ್ಮಕಲಶೋತ್ಸವೆಂದರೆ ಕ್ಷೇತ್ರದಲ್ಲಿ ದೇವರ ಸಾನಿಧ್ಯ ವೃದ್ಧಿಯಾಗುವುದಾದರೆ, ಊರಿನ ಪ್ರತಿ ಮನೆ- ಮನವೂ ಅಭಿವೃದ್ಧಿಯಾಗುವುದು.

ಬ್ರಹ್ಮಕಲಶೋತ್ಸವದ ದಿನ ದೇವಾಲಯಕ್ಕೆ ಬಂದ ಪ್ರತಿಯೋರ್ವ ಭಕ್ತರಿಗೂ ಮಂತ್ರಾಕ್ಷತೆ ಸಹಿತ ತೀರ್ಥಪ್ರೋಕ್ಷಣೆಗೈಯುವ ಕಾರ್ಯ ನಡೆಯಬೇಕು. ದೇವಾಲಯದಲ್ಲಿ ದೇವತಾ ಪೂಜೆ ಪುನಸ್ಕಾರದ ಜೊತೆಗೆ ಸ್ವಚ್ಚತೆ, ಅತಿಥಿ ಸತ್ಕಾರವು ಶ್ರೇಷ್ಠಮಟ್ಟದಲ್ಲಿರಬೇಕು. ಬ್ರಹ್ಮಕಲಶೋತ್ಸವದ ಎಲ್ಲಾ ದಿನಗಳಲ್ಲಿ ಊರವರಿಗೆ ಮತ್ತು ಬಂದ ಭಕ್ತಾದಿಗಳಿಗೆ ದೇವಾಲಯದಲ್ಲಿಯೇ ಮೂರು ಹೊತ್ತಿನ ಊಟೋಪಚಾರ ಲಭಿಸುವಂತಾಗಬೇಕು. ಪ್ರತಿ ಮನೆಯಿಂದಲೂ ಕನಿಷ್ಠ ೫ ಸಾವಿರ ವಂತಿಗೆಯನ್ನು ಸ್ವಯಂಪ್ರೇರಿತರಾಗಿ ನೀಡಿದರೆ ಕಾರ್ಯಕ್ರಮವನ್ನು ಉತ್ತಮವಾಗಿ ನಡೆಸಬಹುದೆಂದು ತಿಳಿಸಿದ ಅವರು, ಅನ್ನಸಂತರ್ಪಣೆಗೆ ತನ್ನ ವೈಯಕ್ತಿಕ ನೆಲೆಯಲ್ಲಿ ಒಂದು ಲಕ್ಷ ರೂಪಾಯಿಯನ್ನು ನೀಡುವುದಾಗಿ ಘೋಷಿಸಿದರು.

ಬ್ರಹ್ಮಕಲಶೋತ್ಸವದ ಗೌರವ ಸಲಹೆಗಾರ, ಹಿಂದೂಪರ ಸಂಘಟನೆಗಳ ಮುಖಂಡ ಅರುಣ್ ಕುಮಾ‌ರ್ ಪುತ್ತಿಲ ಮಾತನಾಡಿ, ದೇವಾಲಯಗಳ ಮೂಲಕ ಹಿಂದೂ ಸಮಾಜ ಇನ್ನಷ್ಟು ಸಂಘಟಿತವಾಗಬೇಕಿದೆ. ಹಿಂದೂಗಳಾದ ನಾವೆಲ್ಲರೂ ಒಂದೇ ಎಂಬ ಮನೋಭಾವದಡಿ ದೇವಾಲಯಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದರು. ಶ್ರೀ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಉದಯಶಂಕರ ಭಟ್ ನಡುಸಾರು ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀ ದೇವಾಲಯದ ಬ್ರಹ್ಮಕಲಶೋತ್ಸವನ್ನು ಡಿ.18ರಿಂದ 23ರವರೆಗೆ ನಡೆಸಲು ಊರ- ಪರವೂರ ಭಕ್ತಾದಿಗಳು ನಿರ್ಣಯಿಸಿದ್ದು, ಅದಕ್ಕೂ ಮೊದಲು ಇಲ್ಲಿ ಬ್ರಹ್ಮರಾಕ್ಷಸನ ಪ್ರತಿಷ್ಠೆಯಾಗಿ ಆರಾಧನೆಯಾಗಬೇಕೆಂದು ತಾಂಬೂಲ ಪ್ರಶ್ನೆಯಲ್ಲಿ ತಿಳಿದು ಬಂದಿದೆ. ಅದಕ್ಕೆ ಕಟ್ಟೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಸೆ.4 ಮತ್ತು 5ರಂದು ಬ್ರಹ್ಮರಾಕ್ಷಸನ ಪ್ರತಿಷ್ಠೆ ಕಾರ್ಯ ನಡೆಯಲಿದೆ. ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಶ್ರೀ ದೇವರಿಗೆ ಬೆಳ್ಳಿ ಕವಚ ಸಮರ್ಪಿಸಲು ನಿರ್ಧರಿಸಿದ್ದೇವೆ. ಇದಕ್ಕೆಲ್ಲಾ ಭಕ್ತಾದಿಗಳ ತನು-ಮನ-ಧನದ ಸಹಕಾರ ಬೇಕು ಎಂದರು.

ಈ ಸಂದರ್ಭ ಮುಂಬರುವ ಬ್ರಹ್ಮಕಲಶಾಭಿಷೇಕ ಸುಸೂತ್ರವಾಗಿ ನಡೆಯಲು 24 ಸಮಿತಿಗಳನ್ನು ರಚಿಸಲಾಯಿತು. ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಜಗದೀಶ ರಾವ್ ಮಣಿಕ್ಕಳ, ಉಪಾಧ್ಯಕ್ಷರಾದ ಪ್ರತಾಪ್ ಪೆರಿಯಡ್ಕ, ಚಂದಪ್ಪ ಮೂಲ್ಯ, ಡಾ. ರಾಜಾರಾಮ್ ಕೆ.ಬಿ., ಪ್ರಧಾನ ಕಾರ್ಯದರ್ಶಿ ಎನ್. ಜಯಗೋವಿಂದ ಶರ್ಮ, ಜೊತೆ ಕಾರ್ಯದರ್ಶಿ ಸುರೇಶ್ ಗೌಂಡತ್ತಿಗೆ, ಲಕ್ಷ್ಮಣ ಗೌಡ ನೆಡ್ಡಿಲ್, ಕೋಶಾಧಿಕಾರಿ ರಾಮಚಂದ್ರ ಮಣಿಯಾಣಿ, ಕೇಶವ ಗೌಡ ರಂಗಾಜೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಆಡಳಿತ ಸಮಿತಿಯ ಉಪಾಧ್ಯಕ್ಷೆ ಶಾಂಭವಿ ರೈ, ಕೋಶಾಧಿಕಾರಿ ಹರೀಶ್ವರ ಮೊಗ್ರಾಲ್ ಕುವೆಚ್ಚಾರು, ಸದಸ್ಯರಾದ ಶಂಕರನಾರಾಯಣ ಭಟ್ ಬೊಳ್ಳಾವು, ಸದಾನಂದ ಶೆಟ್ಟಿ ಕಿಂಡೋವು, ಲೋಕೇಶ ಬೆತ್ತೋಡಿ, ವಿಜಯ ಶಿಲ್ಪಿ ಕುಕ್ಕುಜೆ, ಜತ್ತಪ್ಪ ನಾಯ್ಕ ಬೊಳ್ಳಾವು, ರಾಮಣ್ಣ ಶೆಟ್ಟಿ ಬೊಳ್ಳಾವು, ನವೀನ್ ಕುಮಾರ್ ಕಲ್ಯಾಟೆ, ಪ್ರಮುಖರಾದ ಸುನೀಲ್ ಕುಮಾರ್ ದಡ್ಡು, ವಿದ್ಯಾಧರ ಜೈನ್, ರಾಧಾಕೃಷ್ಣ ಭಟ್ ಬೊಳ್ಳಾವು, ಪ್ರಶಾಂತ್ ಪೆರಿಯಡ್ಕ, ರಾಧಾಕೃಷ್ಣ ನಾಕ್, ಪ್ರಸನ್ನ ಪೆರಿಯಡ್ಕ, ಚೇತನ್ ಮೊಗ್ರಾಲ್ ಕುವೆಚ್ಚಾರು, ಗಿರೀಶ್ ಆರ್ತಿಲ, ಚಿದಾನಂದ ಪಂಚೇರು, ಸುಜೀತ್ ಬೊಳ್ಳಾವು, ವಿಶ್ವನಾಥ ಶೆಟ್ಟಿ ಕಂಗೈ, ವಸಂತ ಕುಂಟಿನಿ ಮತ್ತಿತ್ತರರು ಉಪಸ್ಥಿತರಿದ್ದರು.

ದೇವಾಲಯದ ಆಡಳಿತ ಮಂಡಳಿ ಸದಸ್ಯರಾದ ಸುರೇಶ್ ಅತ್ರೆಮಜಲು ಸ್ವಾಗತಿಸಿದರು. ಅವನೀಶ್ ಪಿ. ಪೆರಿಯಡ್ಕ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top