ಮಂಗಳೂರು: ಶಾಲಾ ಆವರಣ ಮತ್ತು ಮೈದಾನವನ್ನು ಶೈಕ್ಷಣಿಕೇತರ ಚಟುವಟಿಕೆಗಳಿಗೆ ಬಳಸುವುದಕ್ಕೆ ನಿಷೇಧಿಸಿ ದ.ಕ.ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹೊರಡಿಸಿರುವ ಕ್ರಮವನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ಖಂಡಿಸಿದ್ದಾರೆ.
ದೈವ, ದೇವರುಗಳ ನಾಡಾಗಿರುವ ದಕ್ಷಿಣ ಕನ್ನಡ ಜಿಲ್ಲೆ ಸಾಂಸ್ಕೃತಿಕ ಹಾಗೂ ದೈವೀಕ ಆಚರಣೆಯನ್ನು ಸದಾ ಮೈಗೂಡಿಸಿಕೊಂಡಿರುವ ನೆಲೆ, ಹಬ್ಬ ಹರಿದಿನಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ಹಿಂದೂ ಆಚರಣೆಗಳಿಗೆ ತೊಡಕನ್ನು ಉಂಟು ಮಾಡಿ ನಮ್ಮ ಸಂಸ್ಕೃತಿಯ ಮೇಲೆ ಪ್ರಹಾರ ಮಾಡುವ ವ್ಯವಸ್ಥಿತ ಹುನ್ನಾರ ಹಾಗೂ ಕಾಂಗ್ರೆಸ್ ಪಾರ್ಟಿ ಮತ್ತು ಸಿದ್ದರಾಮಯ್ಯ ಸರಕಾರದ ಹಿಂದೂ ವಿರೋಧಿ ನೀತಿಯ ಮುಂದುವರಿದ ಭಾಗ ಇದಾಗಿದೆ ಎಂದು ಕಟುವಾಗಿ ಟೀಕಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಹಲವು ಹಗರಣಗಳಲ್ಲಿ ಸಿಕ್ಕಿಹಾಕಿಕೊಂಡಿದ್ದು ಹೊರಬರಲಾಗದೇ ಹೆಣಗಾಡುತ್ತಿದೆ, ಸರ್ಕಾರದ ವಿರುದ್ಧ ರಾಜ್ಯಾಧ್ಯಂತ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಯ ದಿಕ್ಕು ತಪ್ಪಿಸಲು ಇಂತಹ ಸಣ್ಣತನ ಪ್ರದರ್ಶಿಸುತ್ತಿದೆ ಎಂದು ಹೇಳಿದರು.
ಹಿಂದುತ್ವದ ಭದ್ರಕೋಟೆಯಲ್ಲಿ ನಿಮ್ಮ ಹಿಂದೂ ವಿರೋಧಿ ಪ್ರಯೋಗಗಳನ್ನು ನಾವು ಹಿಮ್ಮೆಟ್ಟಿಸುತ್ತೇವೆಯೇ ಹೊರತು ಎಂದಿಗೂ ಸಹಿಸುವುದಿಲ್ಲ. ಈ ಕೂಡಲೆ ರಾಜಕೀಯ ಪ್ರೇರಿತ ಆದೇಶವನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.